ಮೂರು ತಿಂಗಳ ಹಿಂದೆ ಅದ್ದೂರಿಯಾಗಿ ಮುಹೂರ್ತ ಆಚರಿಕೊಂಡಿದ್ದ ನಾಗಶೇಖರ್ (Nagasekhar) ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಚಿತ್ರೀಕರಣ ಇದೀಗ ಕನಕಪುರ ರಸ್ತೆಯ ಫಾರಂ ಹೌಸ್ ನಲ್ಲಿ ನಡೆಯುತ್ತಿದೆ. ಅಲ್ಲಿ ತಮ್ಮ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿಯುತ್ತಿದ್ದರು.
ಚಿತ್ರೀಕರಣ ವೀಕ್ಷಣೆಗೆಂದು ಮಾದ್ಯಮ ಮಿತ್ರರನ್ನು ಶೂಟಿಂಗ್ ಲೊಕೇಶನ್ ಗೆ ಆಹ್ವಾನಿಸಿದ್ದ ನಿರ್ದೇಶಕ ನಾಗಶೇಖರ್, ಶೂಟಿಂಗ್ ಆರಂಭಿಸುವುದು ತಡವಾಗಿದ್ದಕ್ಕೆ ಕಾರಣ ನಮ್ಮ ಚಿತ್ರದ ಮತ್ತೋರ್ವ ನಿರ್ಮಾಪಕ, ಒಳ್ಳೆಯ ಸ್ನೇಹಿತ ಮಾಭಿ ನಾರಾಯಣ್ ಅಗಲಿದ್ದು. ಹಾಗಾಗಿ ಲೇಟ್ ಆಯ್ತು ಎಂದು ಆರಂಭದಲ್ಲಿಯೇ ಮಾಹಿತಿ ನೀಡಿದರು.
ನಂತರ ಚಿತ್ರದ ಬಗ್ಗೆ ಮಾತನಾಡುತ್ತ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಭಾಗ ಎರಡು ಆಗಲು ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನ ಶೂಟಿಂಗ್ ನಡೆದಿದೆ. ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾದವು. ರಂಗಾಯಣ ರಘು, ಸಾಧು ಕೋಕಿಲ ಸುಂದರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್ ಮೆಟ್ ಕುಮಾರ್ ಜೊತೆಗಿದ್ದಾರೆ. ನನ್ನ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ. ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್ (Rachita Ram), ಶ್ರೀನಗರ ಕಿಟ್ಟಿ (Srinagar Kitty)ಸಾಥ್ ನೀಡುತ್ತಿದ್ದಾರೆ. ಇದೀಗ ಮೊದಲ ಹಂತದಲ್ಲಿ 5 ದಿನ ಮಾಡಿ ಬ್ರೇಕ್ ಕೊಟ್ಟು ಡಿಸೆಂಬರ್ 2 ರಿಂದ ಬೆಂಗಳೂರಲ್ಲಿ ಡಿ. 9ರಿಂದ ಸ್ವಿಟ್ಜರ್ಲ್ಯಾಂಡ್ ನಲ್ಲಿ 12 ದಿನ ಮುಗಿಸಿ, ನಂತರ ಮುಂಬಯಿ, ಹೈದರಾಬಾದ್ ಶೂಟಿಂಗ್ ಮಾಡಿ, 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಕಾರಣ ಅದೇ ದಿನ ಮೊದಲ ಭಾಗ ಬಿಡುಗಡೆಯಾಗಿತ್ತು. ಜೊತೆಗೆ ಇದೇ ಡಿಸೆಂಬರ್ 29 ನಮ್ಮ ನಿರ್ಮಾಪಕರಾದ ಚಲವಾದಿ ಕುಮಾರ್ ಅವರ ಹುಟ್ಟುಹಬ್ಬ. ಅಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.