ಚಿಕ್ಕಮಗಳೂರು: ದತ್ತಮಾಲೆ ಏಕೆ ಹಾಕಬಾರದು? ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾಭಿಮಾನಕ್ಕೆ ನಾನು ಭಯಪಡುವುದಿಲ್ಲ. ದತ್ತಮಾಲೆ ಹಾಕುವುದು ದೇವರ ಕಾರ್ಯ, ಕಾನೂನು ಬಾಹಿರ ಅಲ್ಲ. ಕಾನೂನು ಬಾಹಿರವಾದ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದರು.
ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ನವರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಾತನೂರಿನ ಟೆಂಟ್ನಲ್ಲಿ ನೀಲಿಚಿತ್ರ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವರನ್ನು ಜನ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರ ಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಮನೆ ಮುಂದೆ ಪೋಸ್ಟರ್ ಅಂಟಿಸಬಹುದು ಎಂದು ಬಂದೋಬಸ್ತ್ ಮಾಡಿಕೊಳ್ಳಲು ಗುಪ್ತಚರ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅವರ ಅಭಿರುಚಿಯನ್ನು ತೋರಿಸುತ್ತದೆ. ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸಿಕೊಂಡು ಬಂದವರು ಈ ಸರಕಾರದಲ್ಲಿದ್ದಾರೆ. ಇಂತಹವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಲೇವಡಿ ಮಾಡಿದರು.