ಅಹಮದಾಬಾದ್: ತಮ್ಮ ಸಿಡಿಲಬ್ಬರದ ಶತಕ (137 ರನ್) ದಿಂದ ಆಸ್ಟ್ರೇಲಿಯಾಕ್ಕೆ 6 ವಿಕೆಟ್ ಗಳ ಗೆಲುವು ತಂದುಕೊಡುವಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮಹತ್ತರ ಪಾತ್ರ ವಹಿಸಿದ್ದರು. ಇದರಿಂದ ಕಾಂಗರೂ ಪಡೆ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹೆಡ್, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ.
ಟೀಮ್ ಇಂಡಿಯಾ ನೀಡಿದ 241 ರನ್ ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ,47 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನತ್ತ ಹೆಜ್ಜೆ ಹಾಕಿತ್ತು. ಆದರೆ ಸಿಡಿಲಬ್ಬರದ ಆಟಗಾರ ಟ್ರಾವಿಸ್ ಹೆಡ್ 137 ರನ್ ಗಳಿಸುವ ಮೂಲಕ ಕಾಂಗರೂ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿಸಿದರು. 4 ನೇ ವಿಕೆಟ್ ಗೆ ಟ್ರಾವಿಸ್ ಹೆಡ್ ಜೊತೆಗೂಡಿದ ಮಾರ್ನಸ್ ಲ್ಯಾಬುಶೇನ್ (58* ರನ್) 192 ರನ್ ಗಳ ಕಾಣಿಕೆಯನ್ನು ನೀಡಿದರು. 43ನೇ ಓವರ್ ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಗೆ ಹೆಡ್ ವಿಕೆಟ್ ಒಪ್ಪಿಸಿದರೂ ತಂಡದ ಗೆಲುವಿಗೆ 2 ರನ್ ಅವಶ್ಯಕತೆ ಇತ್ತು.
ಯಾರೂ ನಿರೀಕ್ಷಿಸಿರದ ದಿನ: ಟ್ರಾವಿಸ್ ಹೆಡ್
15 ಮನಮೋಹಕ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲೇ 137 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಟ್ರಾವಿಸ್ ಹೆಡ್, ಟೀಮ್ ಇಂಡಿಯಾದ ಇನಿಂಗ್ಸ್ ವೇಳೆ ರೋಹಿತ್ ಶರ್ಮಾ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅತಿಥೇಯರ ಬ್ಯಾಟಿಂಗ್ ಬಲವನ್ನು ಮುರಿದಿದ್ದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ಇದೊಂದು ಅನಿರೀಕ್ಷಿತ ದಿನವಾಗಿದೆ ಎಂದು ಹೆಡ್ ಹೇಳಿದ್ದಾರೆ.
“ಆತ (ರೋಹಿತ್ ಶರ್ಮಾ) ಬಹುಶಃ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಆಗಿರುವ ಎಲ್ಲ ಸಾಧ್ಯತೆಗಳೂ ಇವೆ. ರೋಹಿತ್ ಶರ್ಮಾ ಅವರ ಕ್ಯಾಚ್ ಪಡೆದಿದ್ದು ಉತ್ತಮ ಕೆಲಸವಾಗಿದೆ. ಇಲ್ಲದಿದ್ದರೆ ಆತ ಶತಕ ಗಳಿಸುತ್ತಿದ್ದರೆನೋ ಗೊತ್ತಿಲ್ಲ,” ಎಂದು ಹೆಡ್ ಹೇಳಿದ್ದಾರೆ.