ಅಹಮದಾಬಾದ್: 13ನೇ ಆವೃತ್ತಿಯ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (Team India) ಭಾರೀ ನಿರಾಸೆಯಾಗಿದೆ. ಶತಕೋಟಿ ಭಾರತೀಯರ ಕನಸು ಭಗ್ನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಅತೀವ ನೋವುಂಟುಮಾಡಿದೆ.
ಬೆಳಗ್ಗೆಯಿಂದಲೂ ಹರ್ಷೋದ್ಘಾರ ಹಾಕುತ್ತಾ ಟೀಂ ಇಂಡಿಯಾ ಗೆಲುವಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆಸ್ಟ್ರೇಲಿಯಾ (Australia) ತಂಡದ ಗೆಲುವು ಹೇಳತೀರದ ನೋವು ತರಿಸಿತು. ಭಾರತದ ಧ್ವಜ ಹಾರಿಸುತ್ತಾ ದೇಶಾಭಿಮಾನ ಮೆರೆಯುತ್ತಿದ್ದ ಅಭಿಮಾನಿಗಳು ಕೊನೆಯಲ್ಲಿ ಕಣ್ಣಲ್ಲಿ ನೀರು ಕಚ್ಚಿಕೊಂಡು ಹೋಗುವಂತೆ ಮಾಡಿತು. 12 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಭಾರತದ ಕನಸು ಮತ್ತೆ ಕನಸಾಗಿಯೇ ಉಳಿಯಿತು.
ಕೈತಪ್ಪಿದ 9ನೇ ಟ್ರೋಫಿ: ಭಾರತ ತಂಡ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ 2011ರಲ್ಲಿ ಕೊನೆಯ ವಿಶ್ವಕಪ್ ಕಿರೀಟ ಗೆದ್ದು ಬೀಗಿತ್ತು. ಆದ್ರೆ 2013ರಿಂದ ಈಚೆಗೆ 9 ಐಸಿಸಿ ಟ್ರೋಫಿಗಳನ್ನ ಕಳೆದುಕೊಂಡಿರುವುದನ್ನು ಮರೆಯುವಂತಿಲ್ಲ.
2014ರ ಟಿ20 ವಿಶ್ವಕಪ್ ಟೂರ್ನಿ ಫೈನಲ್, 2015ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, 2022ರ ಟಿ20 ವಿಶ್ವಕಪ್ ಸೆಮಿಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಐಸಿಸಿ ಟ್ರೋಫಿ ಕಳೆದುಕೊಂಡಿದ್ದ ಭಾರತ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸೋಲನುಭವಿಸಿ ಮತ್ತೆ ಅಭಿಮಾನಿಗಳ ಆಸೆಗೆ ತಣ್ಣೀರು ಹಾಕಿದೆ.
ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ಗಳಲ್ಲಿ 240 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು