ಮೈಸೂರು:- ಸಿಎಂ ಕುಟುಂಬವನ್ನು ಸಿಲುಕಿಸಬೇಕೆಂಬ ಪ್ರಯತ್ನವನ್ನು ಹೆಚ್ ಡಿ ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ತಂದೆಯವರ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನೂ ಆರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ಕುಟುಂಬದವರನ್ನ ಹಣೆಯುವ ಪ್ರಯತ್ನವನ್ನು ಇವರು ಮೊದಲಿನಿಂದಲೂ ಮಾಡುತ್ತಿದ್ದಾರೆ. ಯಾವುದರಲ್ಲದರೂ ಸಿಎಂ ಕುಟುಂಬವನ್ನು ಸಿಲುಕಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ವರ್ಗಾವಣೆ ಪ್ರಕ್ರಿಯೆಗೆ ದಂಧೆ ಬಣ್ಣ ಕಟ್ಟುವುದಾದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ನಡೆದ ವರ್ಗಾವಣೆಗಳೆಲ್ಲಾ ದಂಧೆಯೇ? ಅವರು ಹಣ ಪಡೆದೇ ವರ್ಗಾವಣೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಇನ್ಸ್ಪೆಕ್ಟರ್ ವಿವೇಕಾನಂದ ಯಾರು ಎಂಬುದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸರ್ ಎಲ್ಲಿಗೆ ಆಗಿದೆ. ಆ ಕ್ಷೇತ್ರದ ವ್ಯಾಪ್ತಿ ಯಾವುದು. ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧ. ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ. ಇವತ್ತಿನ ವರ್ಗಾವಣೆ ಹೆಸರು ನನಗೆ ಗೊತ್ತಿಲ್ಲ ಎಂದರು.
ನನಗೆ ವರುಣ ಕ್ಷೇತ್ರದ ಜವಾಬ್ದಾರಿ ಇದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರೆ ಅದರಲ್ಲಿ ತಪ್ಪೇನಿದೆ. ಎಲ್ಲಾ ವರ್ಗಾವಣೆಯನ್ನೂ ಇವರು ಹಣದ ದೃಷ್ಟಿಯಲ್ಲಿ ನೋಡಿದರೆ ಇವರು ಅದೇ ಕೆಲಸ ಮಾಡುತ್ತಿದ್ದರು ಎಂದು ಅರ್ಥ ಅಲ್ಲವೇ ? ಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಈ ರೀತಿ ನನ್ನ ಮೇಲೆ ಆರೋಪ ಮಾಡುವುದು ನೀಚ ರಾಜಕಾರಣ ಎಂದು ಟೀಕಿಸಿದರು.