ಇತ್ತೀಚೆಗೆ ಪ್ರಕಾಶ್ ವೀರ್ (Prakash Veer) ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿತ್ತು. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದಾರೆ.
ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ.
ಹೆಸರಾಂತ ನಿರ್ದೇಶಕ ಮಿಲನ ಪ್ರಕಾಶ್, ಚಾಲೇಂಜಿಂಗ್ ಸ್ಟಾರ್ ದರ್ಶನ್ (Darshan) ಗಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ದರ್ಶನ್ ಅವರ ಹೊಸ ಸಿನಿಮಾದ (New Cinema) ಮುಹೂರ್ತ ಸದ್ದಿಲ್ಲದೇ ನಡೆಯುವ ಮೂಲಕ ನಿಜವಾಗಿತ್ತು.
ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.