ಬೆಂಗಳೂರು:- ರಾಜ್ಯದ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ವಿಪಕ್ಷ ನಾಯಕನ ಆಯ್ಕೆ ಕೊನೆಗೂ ಆಯ್ಕೆ ಆಗಿದೆ. ಮಾಜಿ ಸಚಿವ ಆರ್ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಶೋಕ್ ನಡೆದು ಬಂದ ಹಾದಿ
ರಾಮಯ್ಯ-ಆಂಜಿನಮ್ಮ ದಂಪತಿ ಮಗನಾಗಿ 1957 ಜುಲೈ 1 ರಂದು ಜಾಲಹಳ್ಳಿಯಲ್ಲಿ ಅಶೋಕ್ ಜನಿಸುತ್ತಾರೆ. ಜಾಲಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಆರ್ ಅಶೋಕ್, ಬಳಿಕ ವಿವಿಪುರಂ ನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮಾಡುತ್ತಾರೆ.
10ನೇ ವಯಸ್ಸಿನಲ್ಲೇ ಆರ್ಎಸ್ಎಸ್ ಸೇರ್ಪಡೆಯಾಗಿದ್ದ ಆರ್ ಅಶೋಕ ಅವರು, 1975-77 ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದಇಂದಿರಾ ಗಾಂಧಿ ಅವರು ವಿಧಿಸಿದ್ದ ತುರ್ತು ಪರಿಸ್ಥಿತಿಯಲ್ಲಿ ಎಲ್ ಕೆ ಅಡ್ವಾಣಿ ಅವರ ಜೊತೆ 1 ತಿಂಗಳ ಕಾಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಸೆರೆ ವಾಸ ಅನುಭವಿಸುತ್ತಾರೆ. ಆಗ ಜೈಲು ಸೇರಿದ್ದ ಆರ್. ಅಶೋಕ್, 1995ರಲ್ಲಿ ಬಿಜೆಪಿಯ ಬೆಂಗಳೂರು ನಗರ ಅಧ್ಯಕ್ಷರಾಗಿ ಅಂದಿನ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಾರೆ.
1997 ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದು ಶಾಸಕರಾಗುತ್ತಾರೆ.ಬಳಿಕ 1999 ಮತ್ತು 2004ರಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಶಾಸಕರಾಗಿ ಆಯ್ಕೆಯಾಗುತ್ತಾರೆ. ಕ್ಷೇತ್ರ ಪುನರ್ ವಿಂಗಡನೆಯ ನಂತರ ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಇವರು 2008, 2018, 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ 7ನೇ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2006-2007 ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಾರೆ. 2008-2010ರಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆರ್ ಅಶೋಕ್, ಇದರ ಜೊತೆಗೆ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರ ಖಾತೆಯ ನಿರ್ವಹಣೆಯನ್ನು ಮಾಡುತ್ತಾರೆ. 2010-2012 ರಲ್ಲಿ ಸಾರಿಗೆ ಸಚಿವ ಮತ್ತು ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ನಂತರ, 2012-2013ರಲ್ಲಿ ಜಗದೀಶ್ ಶೆಟ್ಟರ್ ಸರ್ಕಾರದಲ್ಲಿ ಡಿಸಿಎಂ, ಸಾರಿಗೆ, ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ.
ಇನ್ನು ಆರ್.ಅಶೋಕ್ 2010 ಮತ್ತು 2015 ರಲ್ಲಿ ನಡೆದ BBMP ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿ, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಶ್ರಮವಹಿಸುತ್ತಾರೆ. 2019ರಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಮತ್ತು 2021ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕಂದಾಯ ಸಚಿವ ಹುದ್ದೆ ನಿಭಾಯಿಸಿದ್ದ ಆರ್. ಅಶೋಕ್, ಬಿಎಸ್ವೈ, ಬೊಮ್ಮಾಯಿ ಸರ್ಕಾರದಲ್ಲಿ ವಿಪತ್ತು ನಿರ್ವಹಣೆ ಉಪಧ್ಯಾಕ್ಷರಾಗಿಯು ಕೆಲಸ ಮಾಡಿದ್ದಾರೆ.
2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 55,175 ಬಾರಿ ಮತಗಳ ಅಂತರದಿಂದ ವಿಜಯದ ನಗೆ ಬೀರಿದ್ದರು. ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ್, ಸತತ 7ನೇ ಬಾರಿ ಒಂದೇ ಪಕ್ಷದಲ್ಲಿ ಗೆದ್ದು ಬೀರಿರುವ ಒಕ್ಕಲಿಗ ಸಮುದಾಯದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.