ಬಳ್ಳಾರಿ:- ದಸರಾ ಹಾಗೂ ದೀಪಾವಳಿ ನೆಪದಲ್ಲಿ ಇಲಾಖೆ ಹೆಸರಿನಲ್ಲಿ ಅಗ್ನಿಶಾಮಕ ದಳದ ನೌಕರ ಎಂ.ಪ್ರಭಾಕರ್ ಸ್ವಾಮಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಪ್ರತಿ ಅಂಗಡಿಗೆ ತೆರಳಿ ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಬ್ಬದ ನೆಪದಲ್ಲಿ ಪೆಟ್ರೋಲ್ ಬಂಕ್, ರಸಗೊಬ್ಬರ, ಮದ್ಯದಂಗಡಿ ಸೇರಿದಂತೆ ವಿವಿಧ ಕಡೆ 500 ರಿಂದ 1000 ರೂ.ವರೆಗೆ ಚಂದಾ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಈ ಕುರಿತು ಠಾಣೆಯ ಅಗ್ನಿಶಾಮಕ ವಾಹನ ಚಾಲಕ ಶಾಂತಪ್ಪ ಅವರು, ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಶಾಂತಪ್ಪ ಸೇರಿದಂತೆ ಕೆಲ ಸಿಬ್ಬಂದಿಯು, ಪ್ರಭಾಕರ್ ಸ್ವಾಮಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.