ಬೆಂಗಳೂರು:- ರಾಜಧಾನಿ ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. 34 ವರ್ಷದ ನಾಜ್ನಿ ಮೃತ ಮಹಿಳೆ.
ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ನಿಧನಳಾಗಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿ, ಆಸ್ಪತ್ರೆ ಮುಂಭಾಗ ಧರಣಿ ಕುಳಿತಿದ್ದಾರೆ. ನಾಜ್ನಿ ಮೂರು ದಿನಗಳ ಹಿಂದೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನವಾದರೂ ವೈದರು ಚಿಕಿತ್ಸೆ ನೀಡಿಲ್ಲ. ಮೂರನೇ ದಿನ ಹೊಟ್ಟೆಯಲ್ಲಿ ಗಡ್ಡೆ ಆಗಿದೆ, ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಗುರುವಾರ ಸಂಜೆಯವರೆಗು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಂತರ ನರದ ಸಮಸ್ಯೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಂಬುಲೆನ್ಸ್ನಲ್ಲಿ ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಮಹಿಳೆ ಮೃತಪಟ್ಟಿದ್ದಾಳೆ.
ಮಹಿಳೆ ಮೊದಲೇ ಮೃತಪಟ್ಟಿದ್ದಾಳೆ, ವೈದ್ಯರು ಸುಮ್ಮನೆ ವೆಂಟಿಲೇಟರ್ ಹಾಕಿ ತಮ್ಮ ಆಸ್ಪತ್ರೆಯಿಂದ ಕಳುಹಿಸಿದ್ದಾರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದಿರುವುದೇ ಮಹಿಳೆ ಸಾವಿಗೆ ಕಾರಣವೆಂದು ಆರೋಪಿಸಿ, ವೈದ್ಯರ ವಿರುದ್ಧ ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ಮಾಡಿದರು.