ಬೆಂಗಳೂರು: ಯತೀಂದ್ರ ಅವರು ವರ್ಗಾವಣೆ ವಿಚಾರವಾಗಿ ಮಾತಾಡಿಲ್ಲ. ಸಿಎಸ್ಆರ್ ಫಂಡ್ (ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್) ಬಗ್ಗೆ ಮಾತಾಡಿರುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ಯತೀಂದ್ರ ಅವರ ವೈರಲ್ ಆದ ವೀಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ನಾನು ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ
ಪತ್ರಕರ್ತರ ಪ್ರಶ್ನೆಗೆ, ಐದು ಹೆಸರು ಎಂದರೆ ವರ್ಗ ಏನಯ್ಯ? ಅದು ಸಿಎಸ್ಆರ್ ಲಿಸ್ಟ್. ಶಾಲೆ ಕಟ್ಟಡಗಳನ್ನು ಸಿಎಸ್ಆರ್ ಫಂಡ್ನಿಂದ ರಿಪೇರಿ ಮಾಡಿಸಲಾಲಾಗುತ್ತಿದೆ. ಈ ಬಗ್ಗೆ ಯತೀಂದ್ರ ಅವರು ಹೇಳಿದ್ದಾರೆ. ಕುಮಾರಸ್ವಾಮಿ ರಾಜಕೀಯವಾಗಿ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಬುಧವಾರ ಯತೀಂದ್ರ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು