ಬೆಳಗಾವಿ:- ರೈತರಿಗೆ ಹೆಚ್ಚಿನ ಪರಿಹಾರಕ್ಕಾಗಿ ಹೊಸ ಪ್ರಸ್ತಾವ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ರೈತರ ಅಹವಾಲು ಆಲಿಸಿದ ನಂತರ ಅವರು ಮಾತನಾಡಿದರು.
‘ಪ್ರತಿ ಗುಂಟೆಗೆ ತಲಾ ₹10 ಲಕ್ಷದಂತೆ ಎಕರೆಗೆ ₹4 ಕೋಟಿ ಪರಿಹಾರ ನೀಡಬೇಕೆಂದು ರೈತರ ಬೇಡಿಕೆಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು’ ಎಂದು ನಿರ್ದೇಶನ ಕೊಟ್ಟರು.
‘ಅಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವ ಪಡೆದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ನಿಮಗೆ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ರೈತರಿಗೆ ಭರವಸೆ ನೀಡಿದರು.
‘ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೇಳೆ, ರೈತರಿಗೆ ಹೆಚ್ಚಿನ ಪರಿಹಾರ, ಉದ್ಯೋಗ ನೀಡುವುದಾಗಿ ಹಿಂದಿನ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದರು. ಈಗ ರೈತರಿಗೆ ಅನ್ಯಾಯವಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.