ಧಾರವಾಡ: ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡುತ್ತಿದ್ದ ಕಾಂಗ್ರೆಸ್ ಯುವ ಮುಖಂಡ ಸೇರಿದಂತೆ 12 ಜನರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ವಶಕ್ಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ನಗರದ ಲಕ್ಷ್ಮೀ ಚಿತ್ರಮಂದಿರದ ಬಳಿ ಇರುವ ಫೈನಾನ್ಸ್ ಕಚೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಅಷ್ಟಗಿ ಸೇರಿದಂತೆ 12 ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ದಾಳಿ ವೇಳೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಹಣ ಹಾಗೂ ಇತ್ಯಾದಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಬಾರಿ ರಮ್ಯ ರೆಸಿಡೆನ್ಸಿಯಲ್ಲಿ ನಡೆದ ಇಸ್ಪೀಟ್ ದಾಳಿ ವೇಳೆ ಈಗಿನ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಕೂಡ ಸಿಕ್ಕಿಹಾಕಿಕೊಂಡಿದ್ದರು. ಈಗ ಅವರ ಸಹೋದರನ ಮಗ ರಾಹುಲ್ ಅಷ್ಟಗಿ ಕೂಡ ಇಸ್ಪೀಟ್ ರೇಡ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಮಾಜಕ್ಕೆ ಬುದ್ದಿ ಹೇಳುವವರ ಮಕ್ಕಳೇ ಇಂತಹ ಅಪರಾಧದಲ್ಲಿ ತೊಡಗಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಗರದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.