ಬೆಂಗಳೂರು:- ಕಾಂಗ್ರೆಸ್ಗೆ ತನ್ನ ಶಾಸಕರನ್ನೇ ಸಮಾಧಾನ ಮಾಡಲಾಗುತ್ತಿಲ್ಲ ಎಂದು ಹೇಳುವ ಮೂಲಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ಈಗ ಇರುವ ಕಾಂಗ್ರೆಸ್ಸಿನವರನ್ನೇ ಸಮಾಧಾನವಾಗಿ- ಇಟ್ಟುಕೊಳ್ಳಲು ಆಗ್ತಿಲ್ಲ. ಒಬ್ಬ ಸಚಿವರು ದುಬೈ ಅಂತಾರೆ, ಅದಕ್ಕೂ ಮುಂಚೆ ಮತ್ತೊಬ್ಬರು ಮೈಸೂರಿಗೆ ಅಂತ ಹೇಳ್ತಾರೆ. ಅವರನ್ನೇ ಸಮಾಧಾನವಾಗಿ ಇಟ್ಟುಕೊಳ್ಳಲು ಆಗದವರು ಪಕ್ಷಕ್ಕೆ ಕರೆದುಕೊಂಡವರಿಗೆ ಏನು ಕೊಡುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.
ನ.15ರ ಬಳಿಕ ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ಬರ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವಾಗಲೂ ಸರ್ಕಾರ ಬಂದಾಗ ಇನ್ ಕಮಿಂಗೂ, ಸರ್ಕಾರದ ಅವಧಿ ಮುಗಿಯಲು ಬಂದಾಗ ಔಟ್ ಗೋಯಿಂಗ್.
ಇದು ಸಾಮಾನ್ಯ ಸಂಗತಿ ಅಲ್ವಾ. ಹೊಸದರಲ್ಲಿ ಒಂದಷ್ಟು ಜನ ಪಿಕ್ಚರ್ ಚೆನ್ನಾಗಿರಬಹುದು ಎಂದು ಟಿಕೆಟ್ ತೆಗೆದುಕೊಳ್ಳುತ್ತಾರೆ. ಆಮೇಲೆ “ಇದು ಏನ್ಲಾ ವೇಸ್ಟ್ ಕಣ್ಲಾ ಬಂದಿದ್ದೇ ವೇಸ್ಟ್” ಅಂತ ಅರ್ಧಕ್ಕೆ ಎದ್ದು ಬರ್ತಾರೆ. ಅಲ್ಲಿದ್ದವರೇ ಅಸಮಾಧಾನದಿಂದ ಹೊರಗೆ ಬರ್ತಿದ್ದಾರೆ. ಹೋಗುವವರು ಒಳಗೆ ಹೋಗಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಪ್ರಯೋಗ ಮಾಡಲು ಹೋಗಿ ಬಿಜೆಪಿಗೆ ಸೋಲಾಯಿತು ಎಂಬ ವಿಚಾರವನ್ನು ನಾನು ಸಾರಾಸಗಟಾಗಿ ಒಪ್ಪಲ್ಲ. ಗೆಲುವಿಗೆ ಹೇಗೆ ಹತ್ತು ಕಾರಣಗಳಿರುತ್ತದೆಯೋ ಸೋಲಿಗೂ ಹಾಗೇ ಹತ್ತಾರು ಕಾರಣಗಳಿರುತ್ತವೆ. ಪ್ರಯೋಗಗಳಿಂದಲೇ ಸೋತೆವು ಅನ್ನೋದನ್ನ ನಾನು ಒಪ್ಪುವುದಿಲ್ಲ ಎಂದರು.