ದೊಡ್ಮನೆಯಲ್ಲಿ ಮನೆಯಲ್ಲಿ (Bigg Boss Kannada 10) ಈಗಾಗಲೇ 5 ವಾರಗಳು ಕಳೆದಿವೆ. ಇಷ್ಟು ವಾರಗಳಲ್ಲಿ ಒಂದು ವಾರ ಮಾತ್ರ ಕಿಚ್ಚ ಸುದೀಪ್ ಅವರು ಬಳೆಗೆ ಚಪ್ಪಾಳೆ ನೀಡಿದ್ದರು. ಆದರೆ ಈಗ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ಗೆ ಚಪ್ಪಾಳೆ ನೀಡಿದ್ದಾರೆ. ಪ್ರತಾಪ್ ಆಟಕ್ಕೆ ಭೇಷ್ ಎಂದಿದ್ದಾರೆ.
ಬಿಗ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಪ್ರತಾಪ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅಂದು ಟ್ರೋಲ್ ಆಗಿದ್ದ, ಜೋಕರ್ ಆಗಿದ್ದ ಪ್ರತಾಪ್ ಇಂದು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ, ಈಗ ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದಾರೆ. ಪ್ರತಾಪ್ ಅವರು ಟೀಂನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುಂದಾಳತ್ವ ವಹಿಸಿದ್ದರ ಬಗ್ಗೆ ಸುದೀಪ್ (Sudeep) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ಈ ಶೋನಲ್ಲಿ ಮೊದಲ ಚಪ್ಪಾಳೆ ಸ್ಪರ್ಧಿಯಾಗಿ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಸಲ್ಲಿದೆ.
ಹೊರಗಡೆ ನನ್ನ ಕಳ್ಳ, ಸುಳ್ಳ ಅಂದವರು, ಹೀಯಾಳಿಸಿದವರು, ಈ ಮನೆಯಲ್ಲಿ ಆರಂಭದಲ್ಲಿ ಆದಂತಹ ಘಟನೆಗಳನ್ನು ನೆನಪಿಸಿಕೊಂಡರೆ ಈಗ ಮನಸ್ಸು ಹಗುರವಾಗುತ್ತಿದೆ. ಥ್ಯಾಂಕ್ಯು ಸರ್. ಬಿಗ್ ಬಾಸ್ ಮನೆಯಲ್ಲಿ ಹೊರಗಡೆ ಇದ್ದಾಗ ಎರಡು ಸೈಡ್ ಕಾಣಿಸಲ್ಲ. ಹೌದು, ನಾನು ತಪ್ಪು ಮಾಡಿದ್ದೇನೆ, ಅದನ್ನು ನಾನು ಒಪ್ಪುತ್ತೇನೆ. ಆದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಶ್ನಿಸೋದು ಸರಿ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಇರುತ್ತದೆ, ಅದು ಎಲ್ಲರಿಗೂ ಕಾಣುತ್ತದೆ ಎಂದು ಪ್ರತಾಪ್ ಅವರು ಕಿಚ್ಚ ಸುದೀಪ್ಗೆ ಧನ್ಯವಾದಗಳನ್ನು ಹೇಳಿದ್ದಾರೆ.