ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ ಗೌರಿಶಂಕರ.
ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು. ಇನ್ನು ಕಥಾ ನಾಯಕ ‘ಶಂಕರ’ ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ.
ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ. ಮತ್ತೊಂದೆಡೆ ಅಧಿಕಾರ, ದರ್ಪ, ಹಣ ತುಂಬಿರೋ ಶಂಕರನ ಪರಿವಾರ. ಈ ಎರಡೂ ತದ್ವಿರುದ್ಧ ಭಾವಗಳನ್ನು ಹೊಂದಿರುವ ಇವರಿಬ್ಬರ ನಡುವೆ ನಡೆಯುವ ಘರ್ಷಣೆ, ಸಂಧಾನ, ಪ್ರೇಮಾಂಕುರವೇ ಈ ಧಾರಾವಾಹಿಯ ಮುಖ್ಯಕಥಾ ಹಂದರ.
ಗೌರಿಶಂಕರ (Gauri Shankar) ಧಾರಾವಾಹಿಯಲ್ಲಿ ನಾಯಕನಾಗಿ ಯಶವಂತ್ (Yashwant), ನಾಯಕಿಯಾಗಿ ಕೌಸ್ತುಭಮಣಿ (Kaustubhamani) ನಟಿಸುತ್ತಿದ್ದಾರೆ. ಜೊತೆಗೆ ಜನಪ್ರಿಯ ಕಲಾವಿದರಾದ ವಿದ್ಯಾಮೂರ್ತಿ, ಮೋಹನ್ (Mohan), ಕೀರ್ತಿ ಭಾನು ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ನವೆಂಬರ್ 13, ಸೋಮವಾರದಿಂದ ರಾತ್ರಿ 7 ಗಂಟೆಗೆ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.