ಬೆಂಗಳೂರು: ಗಣಪತಿ ದೇವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರು ನೀಡಿದ್ದಾರೆ.
ಗಣೇಶನ ಆರಾಧನೆ, ಆರಾಧಕರ ಆಚಾರ ವಿಚಾರಗಳ ಬಗ್ಗೆ ಸಾಣೇಹಳ್ಳಿ ಸ್ವಾಮೀಜಿಯವರು ಬಹಳ ತುಚ್ಚ ಮಾತುಗಳಿಂದ ನಿಂದಿಸಿರುವುದು ಅಕ್ಷಮ್ಯ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯಾಧ್ಯಕ್ಷ ಪಟ್ಟ: ನಿರ್ಮಲನಂದನಾಥ ಶ್ರೀ ಆಶೀರ್ವಾದ ಪಡೆದ BY ವಿಜಯೇಂದ್ರ
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರಲ್ಲದೇ, ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ.
ನವೆಂಬರ್ 2ರ ಗುರುವಾರದಂದು ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡುವಾಗ “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ಗಣಪತಿ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿಯ ಸಂದರ್ಭಕ್ಕೆ ನೆಪಮಾತ್ರಕ್ಕೆ ಹುಟ್ಟಿಕೊಂಡ ದೇವರು. ಬಾಹ್ಯವಸ್ತುಗಳಿಂದ ಮಾಡಿದ ದೇವರು ದೇವರಲ್ಲ” ಎನ್ನುವ ಮೂಲಕ ಬಹುದೊಡ್ಡ ಸಮುದಾಯವೊಂದರ ಸುದೀರ್ಘ ನಂಬಿಕೆಗಳಿಗೆ ಉದ್ದೇಶಪೂರ್ವಕ ಧಕ್ಕೆ ತರುವ ಹುನ್ನಾರ ಮಾಡಿದ್ದಾರೆ. ಮಾತ್ರವಲ್ಲ, ಇಂಥ ಭಕ್ತ ಸಮುದಾಯದ ವಿರುದ್ಧ ಸಮಾಜದ ಇನ್ನೊಂದು ವರ್ಗವನ್ನು ಎತ್ತಿಕಟ್ಟುವ ಪ್ರಚೋಧಾನತ್ಮಕ ಕೆಲಸವನ್ನು ಮಾಡಿದ್ದಾರೆ.