ಇಂದು ಭಾರತ ಕೊನೆಯ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇದು 13ನೇ ವಿಶ್ವಕಪ್ ಪಂದ್ಯಾವಳಿಯ ಕೊನೆಯ ಲೀಗ್ ಮುಖಾಮುಖಿಯೂ ಹೌದು. ಇದಕ್ಕೆ ಸಾಕ್ಷಿಯಾಗಲಿರುವ ಅಂಗಳ ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಸ್ಟೇಡಿಯಂ.
ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಲ್ಲಿ ವಿಪರೀತ ನಿರೀಕ್ಷೆಗಳೇನಿಲ್ಲ. ಆದರೆ ಟೀಮ್ ಇಂಡಿಯಾ ಎಲ್ಲ 9 ಪಂದ್ಯಗಳನ್ನು ಗೆದ್ದು ಅಜೇಯ ಅಭಿ ಯಾನ ಕಾಯ್ದುಕೊಂಡು ಬರಬೇಕು ಎನ್ನುವುದು ಅಭಿಮಾನಿಗಳ ನಂಬಿಕೆ. ಸಾಮಾನ್ಯ ತಂಡವಾಗಿದ್ದರೂ ಒಂದೆ ರಡು ಅಚ್ಚರಿಯ ಫಲಿತಾಂಶವನ್ನು ದಾಖಲಿ ಸಿರುವ ನೆದರ್ಲೆಂಡ್ಸ್ ವಿರುದ್ಧ ಬಲಿಷ್ಠ ಭಾರತ ಮೇಲುಗೈ ಸಾಧಿಸದೇ ಇರಲು ಕಾರಣಗಳೇ ಇಲ್ಲ. ಆದರೂ ಎಷ್ಟೆಷ್ಟೋ ದೊಡ್ಡ ತಂಡಗಳನ್ನು ಬಡಿದುರುಳಿಸಿ ಇಲ್ಲಿಯ ತನಕ ಬಂದಿರುವ ರೋಹಿತ್ ಪಡೆ ಕೊನೆಯಲ್ಲಿ ಆಘಾತಕಾರಿ ಫಲಿತಾಂಶವನ್ನು ಕಾಣಬಾರದಲ್ಲ. ಹೀಗಾಗಿ ಈ ಪಂದ್ಯವನ್ನೂ ಹಿಂದಿನಂತೆ ಅತ್ಯಂತ ಗಂಭೀರವಾಗಿಯೇ ಆಡಿ ಭರ್ಜರಿ ಗೆಲುವನ್ನು ಸಾಧಿಸುವುದು ಟೀಮ್ ಇಂಡಿಯಾದ ಗುರಿ ಆಗಬೇಕು, ಮತ್ತು ಆಗಿರುತ್ತದೆ ಕೂಡ. “ಓವರ್ ಕಾನ್ಫಿಡೆನ್ಸ್’ಗೆ ಇಲ್ಲಿ ಜಾಗ ಇರಕೂಡದು.
ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಭಾರತ ಜಯಿಸಿದೆ. ಈ ಪಂದ್ಯ ನಡೆದದ್ದು 2003, 2011ರಷ್ಟು ಹಿಂದೆ. 2011ರ ತವರಿನ ಕೂಟದ ವೇಳೆ ಭಾರತ ಕೊನೆಯ ಸಲ ಡಚ್ಚರ ಪಡೆಯನ್ನು ಎದುರಿಸಿತ್ತು. ಈ ಪಂದ್ಯವನ್ನೂ ಗೆದ್ದರೆ ಮೊದಲ ಸಲ ವಿಶ್ವಕಪ್ ಲೀಗ್ನ ಎಲ್ಲ ಪಂದ್ಯಗಳನ್ನು ಜಯಿಸಿದ ಹಿರಿಮೆ ಭಾರತದ್ದಾಗಲಿದೆ. ಮುಂದೆ ಚಾಂಪಿಯನ್ ಆದದ್ದಿದ್ದರೆ ಅಜೇಯವಾಗಿ ವಿಶ್ವಕಪ್ ಎತ್ತಿದ ಮಹೋನ್ನತ ಸಾಧನೆಗೆ ಟೀಮ್ ಇಂಡಿಯಾ ಭಾಜನವಾಗಲಿದೆ
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಯಿಂದಾಗಿ ಟೀಮ್ ಇಂಡಿಯಾದ ಸಮತೋಲನ ತಪ್ಪಿರುವುದಂತೂ ನಿಜ. ಆದರೆ ಇಲ್ಲಿಯ ತನಕ ಇದು ಅರಿವಿಗೆ ಬಂದಿಲ್ಲ. ಕಾರಣ, ಭಾರತ ಗೆಲ್ಲುತ್ತ ಬಂದಿದೆ. ಪಾಂಡ್ಯ ಸ್ಥಾನದಲ್ಲಿ ಆಡಲಿಳಿದಿರುವ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಆತಂಕ ಇದೆ. 4 ಪಂದ್ಯಗಳಲ್ಲಿ ಅವರು ಗಳಿಸಿದ್ದು 85 ರನ್ ಮಾತ್ರ. ಸರಾಸರಿ 21.25. ಸೂರ್ಯ ಈ ಕೂಟದಲ್ಲಿ ಅರ್ಧ ಶತಕವನ್ನೂ ಹೊಡೆಯದ ಭಾರತದ ಏಕೈಕ ಬ್ಯಾಟ್ಸ್ಮನ್. ನೆದರ್ಲೆಂಡ್ಸ್ ವಿರುದ್ಧವಾದರೂ ದೊಡ್ಡ ಸ್ಕೋರ್ ದಾಖಲಿಸಿ ನಾಕೌಟ್ ಹಣಾಹಣಿಗೆ ಸಜ್ಜಾಗಬೇಕಿದೆ.
ಆರಂಭಿಕರಾದ ರೋಹಿತ್ ಶರ್ಮ- ಶುಭಮನ್ ಗಿಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. 3 ಪಂದ್ಯಗಳಲ್ಲಿ 50 ಪ್ಲಸ್ ರನ್ ಜತೆಯಾಟ ನಡೆಸಿದ್ದಾರೆ. ಬಾಂಗ್ಲಾದೇಶ ವಿರುದ್ಧ 12.4 ಓವರ್ಗಳಲ್ಲಿ 88 ರನ್, ನ್ಯೂಜಿಲ್ಯಾಂಡ್ ಎದುರು 11.1 ಓವರ್ಗಳಿಂದ 71 ರನ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 5.5 ಓವರ್ಗಳಲ್ಲಿ 62 ರನ್ ಸಿಡಿಸಿದ್ದಾರೆ. ಆದರೆ ಉಳಿದ 5 ಪಂದ್ಯಗಳಲ್ಲಿ ಗಳಿಸಿದ್ದು 5, 32, 23, 26 ಮತ್ತು 4 ರನ್ ಮಾತ್ರ.
ಭಾರತದ ಈವರೆಗಿನ ಯಶಸ್ಸಿನಲ್ಲಿ ಬೌಲಿಂಗ್ ಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬುಮ್ರಾ, ಶಮಿ, ಸಿರಾಜ್, ಕುಲದೀಪ್, ಜಡೇಜ ಅತ್ಯಂತ ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಈ ಐವರ ಕಾಂಬಿನೇಶನ್ ಕೂಟದಲ್ಲೇ ಅತ್ಯಂತ ಶಕ್ತಿಶಾಲಿ ಎನಿಸಿದೆ.
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ 543 ರನ್ ಬಾರಿಸಿದ್ದಾರೆ. ಭಾರತದ ರನ್ ಸಾಧಕರ ಯಾದಿಯಲ್ಲಿ ಇವರಿಗೆ ಅಗ್ರಸ್ಥಾನದ ಗೌರವ. ಏಕದಿನ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಕೊಹ್ಲಿ 500 ರನ್ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ. 2011ರಿಂದ ವಿಶ್ವಕಪ್ ಆಡಲಾರಂಭಿಸಿದ ಕೊಹ್ಲಿ ಕ್ರಮವಾಗಿ 282, 305, 443 ರನ್ ಬಾರಿಸಿದ್ದಾರೆ. ಈ 3 ಕೂಟಗಳಲ್ಲಿ ತೆಂಡುಲ್ಕರ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಭಾರತದ ಟಾಪ್ ಸ್ಕೋರರ್ ಆಗಿದ್ದರು.