ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಗೆಲುವಿಗೆ 338 ರನ್ ಗಳ ಗುರಿ ನೀಡಿದೆ.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಪೇರಿಸುವ ಕನನಸಿನಲ್ಲಿದ್ದ ಪಾಕ್ ಟಾಸ್ ನಲ್ಲಿಯೇ ನಿರಾಸೆಯಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ನಿರ್ಧಾರ ಪ್ರಕಟಿಸಿತು. ಪರಿಣಾಮ ಪಾಕಿಸ್ತಾನ ಪಂದ್ಯ ಶುರುವಾಗುದಕ್ಕೂ ಮೊದಲೇ ಸೆಮೀಸ್ ರೇಸ್ ನಿಂದ ಬಹುತೇಕ ಹೊರಬಿದ್ದಿತು.
ಪಾಕ್ ವಿರುದ್ಧ ಬ್ಯಾಟಿಂಗ್ ಅರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಬಾರಿ ಓಪನರ್ ಗಳು ತಕ್ಕ ಮಟ್ಟಿನ ಉತ್ತಮ ಅಡಿಪಾಯ ಹಾಕಿದರು. ಡೇವಿಡ್ ಮಲನ್ 31 ರನ್ ಗಳಿಸಿ ಇಫ್ತಿಕಾರ್ ಎಸೆತದಲ್ಲಿ ಔಟ್ ಆದರೆ ಇನ್ನೋರ್ವ ಆರಂಭಿಕ ಜಾನಿ ಬೈರ್ ಸ್ಟೋವ್ 7 ಬೌಂಡರಿ 1 ಸಿಕ್ಸರ್ ಸಹಿತ 59 ರನ್ ಗೆ ಹಾರಿಸ್ ರವೊಫ್ ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಜೋ ರೂಟ್ 4 ಬೌಂಡರಿ ಸಹಿತ 60 ರನ್ ಪೇರಿಸಿದರೆ, ಬೆನ್ ಸ್ಟೋಕ್ಸ್ 11 ಬೌಂಡರಿ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಶತಕದಂಚಿನಲ್ಲಿ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಹ್ಯಾರಿ ಬ್ರೂಕ್ 30 ರನ್ ಗೆ ಹಾರಿಸ್ ಎಸೆತದಲ್ಲಿ ಔಟ್ ಆದರು. ಕಡೇ ಗಳಿಗೆಯಲ್ಲಿ ನಾಯಕ ಜೋಸ್ ಬಟ್ಲರ್ 27 ರನ್ ಜೋಡಿಸಿದರೆ, ಮೊಯಿನ್ 8 ರನ್ ಗಳಿಸಿದರು. ಕ್ರಿಸ್ ವೋಕ್ಸ್ ಹಾಗೂ ಡೇವಿಡ್ ವಿಲ್ಲಿ ಕ್ರಮವಾಗಿ 4,15 ರನ್ ಬಾರಿಸಿದರು.