ಬೆಂಗಳೂರು :- ಯಡಿಯೂರಪ್ಪ ಎನ್ನುವುದು ಶಕ್ತಿ. ಯಡಿಯೂರಪ್ಪ ರಾಜಕೀಯ ಜೀವನ ಆರಂಭಿಸಿದ್ದೇ ಶಿಕಾರಿಪುರದಲ್ಲಿ. ತಮ್ಮ ಕರ್ಮಭೂಮಿ ಶಿಕಾರಿಪುರದಲ್ಲಿ ಅವರು ಹೋರಾಟ ಕಟ್ಟಿದ ಪರಿ, ಜನರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯವೈಖರಿ, ಏನೇ ಆದರೂ ದಕ್ಕಿಸಿಕೊಳ್ಳುವ ಸಾಮರ್ಥ್ಯ, ಜನ ಸಾಮಾನ್ಯರ ನಾಡಿ ಮಿಡಿತ ಅರಿತು ಅವರಲ್ಲೊಬ್ಬರಾಗುವ ತಳಮಟ್ಟದ ಅನುಭವ, ಎಲ್ಲವನ್ನೂ ದಕ್ಕಿಸಿಕೊಳ್ಳುವ ಮತ್ತು ದಕ್ಕಿಸಿಕೊಂಡ ಮೇರು ವ್ಯಕ್ತಿತ್ವದ ನಾಯಕರಾದ, ಶಿಕಾರಿಪುರದಿಂದ ರಾಜ್ಯದ ಎಲ್ಲೆಡೆ ಆವರಿಸಿಕೊಂಡ ರೀತಿ ಎಲ್ಲವೂ ಈಗ ಇತಿಹಾಸ.
ಇಂತಹ ನಾಯಕರೊಬ್ಬರ ನಿರ್ವಾತವನ್ನು ಭರ್ತಿ ಮಾಡುವುದು ಸುಲಭವಲ್ಲ. ಆದರೆ ಯಡಿಯೂರಪ್ಪನವರ ರೀತಿಯಲ್ಲಿಯೇ ಶಿಕಾರಿಪುರದಿಂದಲೇ ಚುನಾವಣಾ ರಾಜಕೀಯ ಆರಂಭಿಸಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆ ಸ್ಥಾನವನ್ನು ಸಮರ್ಥವಾಗಿ ಭರ್ತಿ ಮಾಡುವತ್ತ ಹೆಜ್ಜೆಯನ್ನು ಈಗಾಗಲೇ ತೋರಿದ್ದು, ಇದರ ಫಲವಾಗಿ ಅವರಿಗೆ ಚಿಕ್ಕ ವಯಸ್ಸಿಲ್ಲಿಯೇ ರಾಜ್ಯಾಧ್ಯಕ್ಷ ಸ್ಥಾನ ಒದಗಿ ಬಂದಿದೆ.
ಬಾಲ್ಯದಿಂದಲೇ ಹೋರಾಟ, ಮಾನವೀಯ ಮುಖ, ಜನಪರ ತುಡಿತದ ತಂದೆಯ ವ್ಯಕ್ತಿತ್ವವನ್ನೇ ನೋಡುತ್ತಾ ಬೆಳೆದ ವಿಜಯೇಂದ್ರ ಸ್ವಭಾವತಃ ತಂದೆಯ ಗುಣವನ್ನೇ ಮೈಗೂಡಿಸಿಕೊಂಡಂತೆ ಕಾಣುತ್ತದೆ. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅನುಭವಿಸಿದ ಅಧಿಕಾರ ಮತ್ತು ಕಷ್ಟಕೋಟಲೆ ಎರಡನ್ನೂ ಹತ್ತಿರದಿಂದ ನೋಡಿದ ವಿಜಯೇಂದ್ರ ಅವರಿಗೆ ಅದನ್ನೆಲ್ಲಾ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಕೂಡ ಬಂದಿದೆ. ಚುನಾವಣೆಯನ್ನು ಎದುರಿಸುವ, ಅಂತಿಮವಾಗಿ ಗೆಲುವಿನ ಪತಾಕೆ ಹಾರಿಸುವ, ತಂತ್ರಗಾರಿಕೆ ರೂಪಿಸುವ, ಜನರನ್ನು ಆಕರ್ಷಿಸುವ ಗುಣ ಬೆಳೆಸಿಕೊಂಡಿದ್ದಾರೆ. ಇದುವರೆಗೆ ಅವರು ಇದ್ದುದು ತಂದೆಯ ನೆರಳಲ್ಲಿ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಂದೆಯ ಕರ್ಮಭೂಮಿ ಮತ್ತು ಅವರ ಕ್ಷೇತ್ರದಲ್ಲಿ ತಾವೇ ಚುನಾವಣಾ ಕಣಕ್ಕೆ ಇಳಿದು ಯಶ ಹೊಂದಿದ್ದು ಮಹತ್ತರ ಮೈಲಿಗಲ್ಲು. ಇದಕ್ಕಿಂತ ಮೊದಲು ಕೆಲವು ಚುನಾವಣೆಗಳಲ್ಲಿ ಬೇರೆಯವರನ್ನು ಗೆಲ್ಲಿಸಿದ ವಿಜಯೇಂದ್ರ ತಮ್ಮ ಸಾಮರ್ಥ್ಯ ತೋರಿಸಿ, ಈ ವಿಚಾರದಲ್ಲಿ ಹೈಕಮಾಂಡ್ ಗಮನವನ್ನು ಕೂಡ ಸೆಳೆದಿದ್ದರು.