ಲಂಕಾ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡವು ಸೆಮೀಸ್ ಹಾದಿ ಸುಲಭಗೊಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ನ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಲಂಕಾ ಪಡೆಯು ನ್ಯೂಜಿಲೆಂಡ್ ತಂಡದ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ.
ಶ್ರೀಲಂಕಾ ನೀಡಿದ್ದ 172 ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಕಿವೀಸ್ ಪಡೆ, 5 ವಿಕೆಟ್ಗಳ ಪ್ರಯಾಸದ ಗೆಲುವು ಸಾಧಿಸಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಣಕ್ಕಿಳಿದ ಸಿಂಹಳೀಯರ ಕನಸು ಭಗ್ನವಾಗಿದೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಂಕಾ ಕುಸಲ್ ಪೆರೆರ(51), ಮಹೀಶ ತೀಕ್ಷಣ(38), ದಿಲ್ಶಾನ್ ಮಧುಶಂಖ(19)ರ ಬ್ಯಾಟಿಂಗ್ ನೆರವಿನಿಂದ 46.4 ಓವರ್ಗಳಲ್ಲಿ 171ರನ್ಗಳಿಸಿ ಸರ್ವಪತನ ಕಂಡಿತು. 32.1 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 128 ರನ್ಗಳ ಮಾತ್ರ ಕಲೆ ಹಾಕಿದ್ದ ತಂಡ 150 ರನ್ಗಳಿಗೆ ಸರ್ವಪತನ ಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಹೇಶ್ ತೀಕ್ಷಣ 10ನೇ ವಿಕೆಟ್ಗೆ ದಿಲ್ಶಾನ್ ಮಧುಶಂಕ ಜೊತೆ ಸೇರಿ 43 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರ್ ಅನ್ನು ಹೆಚ್ಚಿಸಿದರು. ಉಳಿದಂತೆ ನ್ಯೂಜಿಲೆಂಡ್ ಪರ ಬೌಲ್ಟ್ 3 ವಿಕೆಟ್ ಪಡೆದರೆ, ಫೆರ್ಗಿಸನ್, ರವೀಂದ್ರ, ಸ್ಯಾಂಟನರ್ ತಲಾ 2 ವಿಕೆಟ್, ಟಿಮ್ ಸೌಥಿ 1 ವಿಕೆಟ್ ಪಡೆದರು.
172 ರನ್ಗಳ ಸಾಧರಣ ಗುರಿಯನ್ನು ಬೆನ್ನತ್ತಿದ ಕಿವೀಸ್ ಪಡೆ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಬ್ಯಾಟರ್ಗಳಾದ ಕಾನ್ವೆ(45), ರಚಿನ್ ರವೀಂದ್ರ(42) ಜೋಡಿ 86ರನ್ಗಳ ಜತೆಯಾಟವಾಡಿದರು. ಅರ್ಧ ಶತಕದ ಅಂಚಿನಲ್ಲಿದ್ದ ಕಾನ್ವೆ ಚಮೆರಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ರವೀಂದ್ರ, ತೀಕ್ಷಣಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್ಗಿಳಿದ ನಾಯಕ ವಿಲಿಯಮ್ಸನ್(14), ಚಾಪ್ಮೆನ್(7) ಕೂಡ ಬಹುಬೇಗ ನಿರ್ಗಮಿಸಿದರು.
ಮಿಚೆಲ್(43) ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ಯುವ ವೇಳೆ ಮ್ಯಾಥ್ಯುಸ್ ಬಲೆಗೆ ಬಿದ್ದರು. ಅಂತಿಮವಾಗಿ ಗ್ಲೆನ್ ಫಿಲಿಪ್ಸ್ ಮತ್ತು ಲ್ಯಾಥಮ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ಪರ ಏಂಜಿಲೊ ಮ್ಯಾಥ್ಯುಸ್ 2, ತೀಕ್ಷಣ,ಚಾಮೇರಾ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಹಾದಿಯನ್ನು ಸುಲಭ ಮಾಡಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.