ನೆಲಮಂಗಲ;- ಕಳೆದ ೩೦ ವರ್ಷಗಳಿಂದ ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟೀಸ್ ನೀಡದೇ ಏಕಾಏಕಿ ಆಡಳಿತ ಸರಕಾರದ ಪ್ರಭಾವದಿಂದ ಹಸಿರುವಳ್ಳಿಗೆ ಹೊಸದಾಗಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುನೀಲ್ ಆರೋಪಿಸಿದರು.
ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಹಾಗೂ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಚೇರಿಯ ಆಹಾರ ಸರಬರಾಜು ಇಲಾಖೆಯ ವಿರುದ್ಧ ಆರೋಪಿಸಿದರು ಈ ಕುರಿತು ಒಂದು ವರದಿ ಇಲ್ಲಿದೆ.
ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ಚಿಕ್ಕನಹಳ್ಳಿ, ಚಿಕ್ಕನಹಳ್ಳಿ ಬಂಡೆ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ ೭೦೦ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ ೩೦ ವರ್ಷದಿಂದ ಭೈರನಾಯಕನಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು, ಆದರೆ ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿ ಗ್ರಾಮದಲ್ಲಿ ತೆರೆಯಲು ಅರ್ಜಿ ಆಹ್ವಾನಿಸಿ, ಸರಿಯಾದ ತನಿಖಾ ವರದಿ ನೀಡದೇ ಕಳಲುಘಟ್ಟ ವಿವಿಧೋದ್ದೇಶ ಸಹಕಾರ ಸಂಘದ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ, ತಾಲೂಕು ಆಹಾರ ಸರಬರಾಜು ಇಲಾಖೆಗೆ ಒಂದೇ ಅರ್ಜಿ ಸಂಖ್ಯೆಯ ನಕಲಿ ಇ- ಸ್ಟಾಂಪ್ ಬಳಸಿ ಹಾಗೂ ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ರ ಶಿಫಾರಸ್ಸು ಪತ್ರ ಲಗತ್ತೀಸಿ, ಹೊಸ ಪಡಿತರ ಕೇಂದ್ರ ಹಸಿರುವಳ್ಳಿಯಲ್ಲಿ ತೆರೆದಿದ್ದಾರೆ, ಅಧಿಕಾರಿಗಳು ನ್ಯಾಯಯುತ್ತವಾಗಿ ನಡೆಯುತ್ತಿಲ್ಲ, ಅಧಿಕಾರದ ಪ್ರಭಾವದಿಂದ ಕೆಲವರು ಹಸಿರುವಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿದ್ದಾರೆ, ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯಾಧ್ಯಕ್ಷ ಸುನೀಲ್ ಹೇಳಿದರು.
ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬೈರನಾಯ್ಕನಹಳ್ಳಿ ಆನಂದ್, ಆಹಾರ ಇಲಾಖೆ ನನ್ನ ವಿರುದ್ಧ ಹುನ್ನಾರ ನಡೆಸಿ, ಪಡಿತರ ನೀಡುವ ಕೆಲಸವನ್ನು ಕಿತ್ತುಕೊಂಡಿದೆ, ಚುನಾವಣೆಯಲ್ಲಿ ರಾಜಕೀಯ ಮಾಡಲಿ, ಬೇರೆ ವಿಚಾರದಲ್ಲಿ ರಾಜಕೀಯ ಬೇರೆಸುವುದು ಸರಿಯಲ್ಲಾ, ಇಲಾಖೆ ಮತ್ತು ಶಾಸಕರಾದ ಎನ್.ಶ್ರೀನಿವಾಸ್ ರವರು ನನ್ನ ೨೦ ವರ್ಷದ ಸೇವೆ ಗಮನಿಸಬೇಕಿತ್ತು, ಈ ಸ್ಟ್ಯಾಂಪ್ ನಕಲಿ ವಿರುದ್ಧ ನ್ಯಾಯಲಯದ ಮೊರೆಹೋಗಿದ್ದೇನೆ, ಬೈರನಾಯ್ಕನಹಳ್ಳಿ ಮತ್ತೆ ನ್ಯಾಯಬೆಲೆ ಅಂಗಡಿ ವರ್ಗಾಹಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಹಸಿರುವಳ್ಳಿ ಗ್ರಾ.ಪಂ.ಸದಸ್ಯ ಸಿ.ರಾಜಣ್ಣ ಹಾಗೂ ಚಿಕ್ಕನಹಳ್ಳಿ ಸಿದ್ದರಾಜು, ಸ್ಥಳೀಯ ೫೦೦ ಕ್ಕೂ ಅಧಿಕ ಪಡಿತರ ಫಲಾನುಭವಿಗಳು ದೂರು ನೀಡಿದರೆ, ನ್ಯಾಯಬೆಲೆ ಅಂಗಡಿ ವರ್ಗಾಹಿಸಲಿ, ಪಡಿತರ ಪಡೆಯುವ ಫಲಾನುಭವಿಗಳ ಯಾವುದೇ ವಿರೋಧವಿಲ್ಲದಿದ್ದರೂ ಈ ರೀತಿ ಕ್ರಮ, ಸರ್ವಧಿಕಾರ ಕ್ರಮ ಎಂದು ಅಕ್ರೋಶ ಹೊರಹಾಕಿದರು. ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಉಪಾಧ್ಯಕ್ಷ ಗುರುಪ್ರಸಾದ್,ಹಸಿರುವಳ್ಳಿ ಗ್ರಾ.ಪಂ ಸದಸ್ಯ ಸಿ.ರಾಜಣ್ಣ, ಚಿಕ್ಕನಹಳ್ಳಿ ಸಿದ್ದರಾಜು, ಕೆಂಪರಾಜು ಇನ್ನೀತರರಿದ್ದರು.