ರೂಪಾ ರಾವ್ ಈ ಹೆಸರು ನಿಮ್ಮೆಲ್ಲರಿಗೂ ಚಿರಪರಿಚಿತವೇ. ಮೂಲತಃ ಬೆಂಗಳೂರಿನವರಾದ ರೂಪಾ ರಾವ್ ಮಹಿಳಾ ನಿರ್ದೇಶಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಇಂಗ್ಲೀಷ್, ಹಿಂದಿ, ಜರ್ಮನ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಶಾರ್ಟ್ಫಿಲ್ಮ್, ಡಾಕ್ಯೂಮೆಂಟರಿ, ವೆಬ್ ಸೀರೀಸ್ ಡೈರೆಕ್ಟ್ ಮಾಡಿ ಹೆಸರು ಮಾಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಗಂಟುಮೂಟೆ’ ಹೆಸರಲ್ಲೊಂದು ಸಿನಿಮಾ ಮಾಡಿದ್ದರು. ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾ ಕನ್ನಡಿಗರ ಮನಸೂರೆಗೊಂಡು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಸ್ಪರ್ಧೆ ಮಾಡಿತ್ತು. ಒಂದಿಷ್ಟು ಅವಾರ್ಡ್ಗಳನ್ನು ಕೊಳ್ಳೆಹೊಡೆಯೋ ಮೂಲಕ ನಿರ್ದೇಶಕಿ ರೂಪಾ ರಾವ್ಗೆ ಜನಪ್ರಿಯತೆಯ ಕಿರೀಟ ತೊಡಿಸಿತ್ತು. ಇದೀಗ ರೂಪಾ ರಾವ್ (Roopa Rao) ಮತ್ತೆ ಕನ್ನಡ ಕಲಾಭಿಮಾನಿಗಳನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಆದರೆ, ನಿರ್ದೇಶಕಿಯಾಗಿ ಅಲ್ಲ ಬದಲಾಗಿ ನಿರ್ಮಾಪಕಿಯಾಗಿ ಎಂಬುದು ವಿಶೇಷ.
ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ. ಚಿತ್ರಕ್ಕಾಗಿ ತಮ್ಮ ಮನೆಯ ಖಜಾನೆಯನ್ನೆಲ್ಲಾ ಖಾಲಿ ಮಾಡಿಕೊಳ್ಳುವುದು ಇದೆಯಲ್ಲ ಅದಕ್ಕೆ ಬಂಢ ಧೈರ್ಯ ಬೇಕು. ಆ ಎದೆಗಾರಿಕೆ ಒನ್ ಟು ಡಬ್ಬಲ್ ಇರುವುದರಿಂದಲೇ ನಿರ್ದೇಶಕಿ ರೂಪಾ ರಾವ್ ಗ್ಯಾಂಗ್ಸ್ಟರ್ (Gangstar) ಸಿನಿಮಾಗೆ ಕೈ ಹಾಕಿದ್ದಾರೆ. ಒಬ್ಬ ಮಹಿಳಾ ನಿರ್ಮಾಪಕಿಯಾಗಿ ನಯಾ ಸವಾಲೊಂದನ್ನು ಸ್ವೀಕರಿಸಿರುವ ರೂಪಾ ರಾವ್, ಭಾರತೀಯ ಚಿತ್ರರಂಗದಲ್ಲೇ ಗ್ಯಾಂಗ್ ಸ್ಟರ್ ಸಿನಿಮಾ ನಿರ್ಮಿಸ್ತಿರುವ ಮೊದಲ ಮಹಿಳಾ ನಿರ್ಮಾಪಕಿ ಎನ್ನುವ ಖ್ಯಾತಿಗೆ ಪಾತ್ರರಾಗಲು ಹೊರಟಿದ್ದಾರೆ. ಸಹದೇವ್ ಕೆಲವಡಿ ನಿರ್ದೇಶನದ ಪಕ್ಕಾ ಗ್ಯಾಂಗ್ ಸ್ಟರ್ ಕಥೆಯುಳ್ಳ ‘ಕೆಂಡ’ ಸಿನಿಮಾಗೆ ಬಂಡವಾಳ ಸುರಿದಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಶೀರ್ಷಿಕೆಯಿಂದಲೇ ಸಿನಿದುನಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಮೋಷನ್ ಪೋಸ್ಟರ್ನಿಂದ ಸ್ಯಾಂಡಲ್ವುಡ್ ಅಂಗಳದಲ್ಲಿ ಸುದ್ದಿಯಾದ ‘ಕೆಂಡ’ ಈಗ ಕ್ಯಾರೆಕ್ಟರ್ ಟೀಸರ್ನಿಂದ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.
ಇತ್ತೀಚೆಗಷ್ಟೇ ‘ಕೆಂಡ’ (Kenda Film) ಕ್ಯಾರೆಕ್ಟರ್ ಟೀಸರ್ ಹೊರಬಿದ್ದಿದೆ. ಸಚ್ಚಾ, ಶರತ್ ಗೌಡ, ಪ್ರಣವ್ ಶ್ರೀಧರ್, ಬಿ.ವಿ ಭರತ್ ಅವರ ಮೊದಲ ನೋಟಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಈ ಹುಡುಗರು ಹೊಸಬರಾದ್ರೂ ಕೂಡ ರಂಗಭೂಮಿಯಲ್ಲಿ ಪಳಗಿರುವುದರಿಂದ ಕನ್ನಡ ಕಲಾಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ದುಗದಲವಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿರುವ ‘ಕೆಂಡ’ ಚಿತ್ರವನ್ನ ಈ ಹುಡುಗರು ಅದ್ದೂರಿಯಾಗಿ ಪ್ರಮೋಟ್ ಮಾಡ್ತಿದ್ದಾರೆ. ಕೆಂಪೇಗೌಡ್ರ ಕಣದಲ್ಲಿ ಅಖಾಡಕ್ಕಿಳಿದು ಕರಪತ್ರ ಹಂಚುವ ಮೂಲಕ ‘ಕೆಂಡ’ ಸಿನಿಮಾವನ್ನ ಕರುನಾಡಿನ ಮೂಲೆಮೂಲೆಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.