ಬೆಂಗಳೂರು: ನಿನ್ನೆ ಸಂಜೆ ಶುರುವಾದ ಮಳೆ ರಾತ್ರಿಯಿಡಿ ಸುರಿದು ನಾನಾ ಅವಾಂತರ ಸೃಷ್ಟಿ ಮಾಡಿದೆ. ರಸ್ತೆಗಳೆಲ್ಲಾ ಜಲಾವೃತವಾದ್ರೆ, ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ. ಅಂಗಡಿ-ಆಸ್ಪತ್ರೆಗಳಿಗೂ ಜಲದಿಗ್ಬಂಧನವಾಗಿದೆ. ಮನೆ ಮುಂದೆ ನಿಲ್ಲಿಸಿದ ಕಾರು-ಬೈಕು ಮುಳುಗಿ ಹೋಗಿದೆ. ಬೆಳಗ್ಗೆಯಾದ್ರೂ ಮನೆಗೆ ಬಂದ ನೀರು ಹೊರಹಾಕಲು ಜನರು ಪರದಾಡಿದ್ರು.
ಗಾರ್ಡನ್ ಸಿಟಿ ಬೆಂಗಳೂರು ಭೀಕರ ಮಳೆಗೆ ಮತ್ತೆ ಬೆಚ್ಚಿ ಬಿದ್ದಿದೆ. ಮಳೆ ಇಲ್ಲದೆ ತೀವ್ರ ಪರದಾಟ ಶುರುವಾಗಿದ್ದ ಸಮಯದಲ್ಲಿ ಮಳೆರಾಯ ಕರುಣೆ ತೋರಿಸಲಿಲ್ಲ, ಆದರೆ ಇದೀಗ ಚಳಿಗಾಲ ಹತ್ತಿರವಾಗುತ್ತಿರುವ ವೇಳೆ ಮಳೆ ಅಬ್ಬರ ಜೋರಾಗುತ್ತಿದೆ. ಈ ಮೂಲಕ ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಮಳೆ ರಾಜ್ಯದ ಜನರ ಕೈಹಿಡಿದಿದೆ. ಅಷ್ಟಕ್ಕೂ ಕಳೆದ ರಾತ್ರಿ ಶುರುವಾದ ಮಳೆ ಆರ್ಭಟ, ಸಿಲಿಕಾನ್ ಸಿಟಿ ಎಂಬ ಬಿರುದು ಪಡೆದ ರಾಜಧಾನಿ ಬೆಂಗಳೂರನ್ನು ಅಕ್ಷರಶಃ ನಲುಗಿ ಹೋಗುವಂತೆ ಮಾಡಿದೆ. ಈ ಸಮಯದಲ್ಲೇ ವಾಹನ ಸವಾರರು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳು ಮಳೆಯ ನೀರು ಪಾರ್ಕಿಂಗ್ ಏರಿಯಾಗೆ ನುಗ್ಗಿದ ಕಾರಣ ಪರದಾಡಿದ್ದಾರೆ.
ಯೆಸ್…ನಿನ್ನೆ ಸುರಿದ ಮಳೆಗೆ..ರಾಜಧಾನಿ ತತ್ತರಿಸಿ ಹೋಗಿದೆ…ರಾತ್ರಿಯೆಲ್ಲ ಸಿಲಿಕಾನ್ ಸಿಟಿಯ ರಸ್ತೆಗಳು ಜಲವಾವೃತವಾಗಿದ್ರೆ, ಮನೆಗೆ ನೀರು ನುಗ್ಗಿ ಜನರ ಪರದಾಟ ನಡೆಸಿದ್ರು. ರಾತ್ರಿ ಕಳೆದು ಬೆಳಗ್ಗೆ ಆದರೂ ಇದರ ಎಫೆಕ್ಟ್ಕಮ್ಮಿಯಾಗಿರಲಿಲ್ಲ… ಅಂಗಡಿ.. ಹೊಟೇಲ್ ..ಮನೆಗಳಿಗೆ ನುಗ್ಗಿದ ನೀರನ್ನ ಸೂರ್ಯ ನೆತ್ತಿಮೇಲೆ ಬರೋ ವರೆಗೂ ಹೊರಹಾಕಿದ್ರು..ನಿನ್ನೆ ರಾತ್ರಿ ಮಳೆಮಾಡಿದ ಅವಾಂತರದ ಒಂದೊಂದೆ ಸೀನ್ ನಿಮ್ಮ ಮುಂಡ್ತೀವಿ ನೋಡಿ.
ಸಹಕಾರ ನಗರದ ಸಿಟಿ ಮಾರ್ಕೇಟ್ ಹಿಂಭಾಗ ಇರುವ ಈ ಬೇಬಿ ಕೇರ್ ಶಾಪ್ ನ ಸ್ಥಿತಿ ನೋಡಿ..ಪ್ರತಿ ದಿನ ಬೆಳಗ್ಗೆ ಜನರಿಂದ ತುಂಬಿರ್ತಿತ್ತು. ಆದರೆ ಇವತ್ತು ಅಂಗಡಿ ತುಂಬ ನೀರು ತುಂಬಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೆಳಗ್ಗೆಯೆಲ್ಲ ನೀರು ಹೊರಹಾಕಿ ಮಾಲೀಕರು ಸುಸ್ತಾಗಿ ಹೋಗಿದ್ದಾರೆ. ಪ್ರತಿ ಬರೀ ಮಳೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಂತೆ. ಡ್ರೈನೇಜ್ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇದು ಸಹಕಾರ ನಗರದ ಜೆ ಬ್ಲಾಕ್ ನಲ್ಲಿರುವ ಮನೆಯೊಂದರ ಪರಿಸ್ಥಿತಿ, ಮನೆಯೊಳಗೆ ನುಗ್ಗಿದ ಚರಂಡಿ ನೀರು ಹೂವಿನ ವ್ಯಾಪರ ಮಾಡಿಕೊಂಡಿದ್ದ ವೃದ್ಧ ದಂಪತಿ ಪಾಲಿಗೆ ಶತ್ರುವಾಗಿದೆ. ಅಸಹಾಯಕರಾಗಿ ಹಿರಿಜೀವಿ ದಂಪತಿ ಹಿಡಿಶಾಪ ಹಾಕುತ್ತಾ ಮನೆಯಿಂದ ನೀರು ಹೊರಹಾಕಿದ್ರು.
ಇನ್ನೂ ಸಹಕಾರ ನಗರದ ಜೆ. ಬ್ಲಾಕ್ ನ 40ಕ್ಕೂ ಹೆಚ್ಚು ಅಂಗಡಿ-ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಗೋಳಾಡುವಂತಾಗಿತ್ತು. ರಾತ್ರಿ ಕಳೆದು ಬೆಳಗ್ಗೆ ಆದರೂ ನೀರು ಹೋರಹಾಕಲು ನಿವಾಸಿಗಳು ಪರದಾಡಿದ್ರು, ರಾಜಕಾಲುವೇ ನೀರು ಹೋಗಲು ಸರಿಯಾದ ದಾರಿ ಬಿಡದೇ ಇರೋದೆ ಈ ಅವಾಂತರಕ್ಕೆ ಕಾರಣವಾಗಿತ್ತು. .ಸಹಕಾರ ನಗರ ಮುಖ್ಯ ರಸ್ತೆಯಲ್ಲಿರುವ ದೊಣ್ಣೆ ಬಿರಿಯಾನಿ ಹೊಟೇಲ್ ನ ಸ್ಥಿತಿ ನೋಡಿ..ನೀರಿನಿಂದ ಇಡೀ ಹೊಟೇಲ್ ಜಲಾವೃತವಾಗಿ, ಸೂರ್ಯ ನೆತ್ತಿಗೆ ಬಂದರು ಹೊಟೇಲ್ ಸಿಬ್ಬಂದಿ ಮೋಟರ್ ಮೂಲಕ ನೀರು ಹೊರಹಾಕ್ತಿದ್ರು.
ಅತ್ತ ಯಲಹಂಕದ ಭಾಗದಲ್ಲಿ ನಿನ್ನೆ 14.7 ಸೆಂಟಿ ಮೀಟರ್ ಮಳೆ ಸುರಿದಿದೆ. ಕೋಗಿಲ್ ಕ್ರಾಸ್ ನ ರೇಲ್ವೇ ಸ್ಟೇಷನ್ ರಸ್ತೆಯಲ್ಲಿ ಬೆಳಗ್ಗೆಯಾದ್ರೂ 3 ಅಡಿ ನೀರು ನಿಂತಿತ್ತು. ಮಾಗಡಿ ರಸ್ತೆ ಮಂಜುನಾಥ ನಗರದಲ್ಲಿ ರಾತ್ರಿ ಸುರಿದ ಮಳೆಗೆ ಗೂಡ್ಸ್ ವಾಹನ ನಿಂತಿದ್ದಾಗ ರಸ್ತೆ ಕುಸಿದಿದೆ.
ಕಳೆದ ರಾತ್ರಿ ಸುರಿದ ಮಳೆ ಹಾನಿ ಪರಿಸ್ಥಿತಿ ಅವಲೋಕನಕ್ಕೆ ಖುದ್ದು ಫೀಲ್ಡಿಗಿಳಿದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಬಿಎಂಪಿ ವಾರ್ ರೂಂಗೆ ಭೇಟಿ ಕೊಟ್ಟಿದ್ದರು. ಸ್ಥಳದಲ್ಲೇ ಕುಳಿತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ವಲಯವಾರು ಅಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಸಮಸ್ಯೆ ಕೇಳಿದ್ದರು. ಅಲ್ಲದೇ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಹಿತಿ ನೀಡಿದ್ದರು. ಏನು ಸಮಸ್ಯೆ ಆಗದಂತೆ ಅಧಿಕಾರಿಗಳು ಡಿಸಿಎಂ ಸೂಚನೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮುಂದಿನ 3 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಲ್ಲಿ ಮಳೆ ಸಾಧ್ಯತೆ ಇರಲಿದೆ. ಕರಾವಳಿಗೆ ಇವತ್ತು ಯಲ್ಲೋ ಅಲರ್ಟ್ ಇದ್ದು, ದಕ್ಷಿಣ ಒಳನಾಡಿಗೆ ಮೂರು ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟಿನಲ್ಲಿ ಒಂದೆಡೆ ಮಳೆರಾಯ ಸಂತಸ ತಂದರೆ, ಮತ್ತೊಂದೆಡೆ ಸಾಕಷ್ಟು ಅವಾಂತರಗಳನ್ನೇ ಸೃಷ್ಠಿ ಮಾಡಿರೋದಂತೂ ನಿಜ