ಬೆಂಗಳೂರು;- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ನಿವಾಸಿಗಳು ಹೈರಾಣಾಗಿದ್ದಾರೆ. ಅನೇಕ ಕಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ, ಮರಗಳು ಧರೆಗೆ ಉರುಳಿವೆ. ಇನ್ನು ಯಲಹಂಕ-ಜಕ್ಕೂರು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಯಲಹಂಕ-ಜಕ್ಕೂರು ಪ್ರದೇಶದಲ್ಲಿ 113.50 ಮಿಲಿ ಮೀಟರ್ ಮಳೆಯಾಗಿದೆ.
ಕಳೆದ ಎರಡೂ ಮೂರು ದಿನದಿಂದ ವಾತಾವರಣದಲ್ಲಿ ಬದಲಾವಣೆ ಹಾಗೂ ಬೆಳಿಗ್ಗೆಯಿಂದ ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದಿದ್ದ ಸಿಲಿಕಾನ್ ಸಿಟಿಗೆ ಇದ್ದಕ್ಕಿಂತೆ ಮಳೆರಾಯ ತಂಪೆರೆದಿದ್ದ. ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಹೊತ್ತಲ್ಲಿ, ಇದ್ದಕ್ಕಿದ್ದಂತೆ ಮಳೆರಾಯ ಎಂಟ್ರಿಯಾಗಿದ್ದು ಅರ್ಧ ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆ ಅಲ್ಲಲ್ಲಿ ಟ್ರಾಫಿಕ್ ಜಾಂ ಆಗುವಂತೆ ಮಾಡಿತ್ತು. ರಸ್ತೆಗಳೆಲ್ಲ ನದಿಗಳಂತಾಗಿದ್ದವು.
ಬೆಂಗಳೂರು ಪೂರ್ವ ವಲಯ-1, ಮಹದೇವಪುರ ವಲಯ-1, ಬೆಂಗಳೂರು ದಕ್ಷಿಣ ವಲಯದಲ್ಲಿ ಧಾರಾಕಾರ ಮಳೆಯಿಂದ ಮರಗಳು ಧರೆಗುರುಳಿವೆ. ನಗರದ ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಹರಿಯುತ್ತಿದೆ. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿ ಅಪಾರ್ಟ್ಮೆಂಟ್ ಸುತ್ತಲೂ ಇರುವ ಪಾರ್ಕಿಂಗ್ ಜಾಗ ಜಲಾವೃತಗೊಂಡಿದೆ. ಕಳೆದ ಬಾರಿಯೂ ಮಳೆ ಬಿದ್ದಾಗ ನೀರು ನುಗ್ಗಿ ಅವಾಂತರ ಆಗಿತ್ತು.
ಎಲ್ಲೆಲ್ಲಿ ಎಷ್ಟು ಮಳೆ?
ಯಲಹಂಕ-ಜಕ್ಕೂರು ಪ್ರದೇಶದಲ್ಲಿ 113.50 ಮಿಲಿ ಮೀಟರ್ ಮಳೆ
ಹಂಪಿ ನಗರದ ವ್ಯಾಪ್ತಿಯಲ್ಲಿ 86 ಮಿಲಿ ಮೀಟರ್ ಮಳೆಯಾಗಿದೆ
ನಾಗಪುರ ಬಡಾವಣೆಯಲ್ಲಿ 82.50 ಮಿಲಿ ಮೀಟರ್ ಮಳೆ ದಾಖಲು
ನಂದಿನಿ ಲೇಔಟ್ನಲ್ಲಿ 70.60 ಮಿ.ಮೀ.,ನಾಗೇನಹಳ್ಳಿ 71 ಮಿ.ಮೀ.
ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯಲ್ಲಿ 69.50 ಮಿಲಿ ಮೀಟರ್ ಮಳೆ
ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 68 MM
ಕೊಟ್ಟಿಗೆಪಾಳ್ಯ 64 ಮಿ.ಮೀ.,
ಅಗ್ರಹಾರದಾಸರಹಳ್ಳಿ 64 ಮಿ.ಮೀ. ಮಳೆ
ಕಮ್ಮನಹಳ್ಳಿ (ಈಸ್ಟ್ ಜೋನ್) 6.95 ಸೆಂ.ಮೀ ಮಳೆ
ಮಾರುತಿ ಮಂದಿರ ವಾರ್ಡ್ 6.8 ಸೆಂ.ಮೀ ಮಳೆ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 6.75 ಸೆಂ. ಮೀ ಮಳೆ