ಇಂದು ಸಿಲಿಕಾನ್ ಸಿಟಿ ಜನರಿಗೆ ಬಿಸಿಲಿನ ಬಿಸಿಯಿಂದ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಮಧ್ಯಾಹ್ನನದಿಂದ ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಇದರಿಂದ ತಂಪಾದ ವಾತಾವರಣ ಸೃಷ್ಟಿಯಾಗಿದ್ದು ಸಂಜೆಯಾಗುತ್ತಿದ್ದಂತೆ ಸ್ನ್ಯಾಕ್ಸ್ಗೆ ಬೇಡಿಕೆ ಹೆಚ್ಚಾಗಿದೆ.
ಮಳೆ ಬರುವಾಗ ಒಂದು ಪ್ಲೇಟ್ ಬಜ್ಜಿ ಅದರೊಂದಿಗೆ ಚಹಾ ಇದ್ದರೆ ಅದರ ಮಜಾನೇ ಬೇರೆ. ಹೀಗಾಗಿ ಬೆಂಗಳೂರು ತಂಪಾಗುತ್ತಿದ್ದಂತೆ ಬಜ್ಜಿ, ಬೊಂಡಾ, ಚಹಾ, ಕಾಫಿ, ಫ್ರೆಂಚ್ ಫ್ರೈಸ್, ಮ್ಯಾಗಿ ಹೀಗೆ ಬಗೆ ಬಗೆಯ ತಿಂಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಟೀ ಅಂಗಡಿ, ಬೀದಿ ಬದಿ ಹಾಗೂ ರಸ್ತೆ ಸ್ನ್ಯಾಕ್ಸ್ ಅಂಗಡಿಗಳತ್ತ ಜನ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ.
ಅದರಲ್ಲೂ ಮಳೆ ಬಂದಾಗ ಹೆಚ್ಚು ತಿನ್ನಲು ಮನಸ್ಸಾಗೋದು ಕರಿದ ತಿಂಡಿಗಳಲ್ಲಿ ಒಂದಾದ ಬಜ್ಜಿಯನ್ನ. ಹೀಗಾಗಿ ಮಳೆ ಅಥವಾ ತಂಪಾದ ವಾತಾವರಣದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬಜ್ಜಿಯಲ್ಲೂ ನಾನಾ ಬಗೆಯ ಬಜ್ಜಿಗಳಿವೆ. ಜನರು ತಮ್ಮ ಇಷ್ಟಕ್ಕನುಗುಣವಾಗಿ ಬಜ್ಜಿಗಳನ್ನು ಖರೀದಿಸಿ ಆನಂದಿಸುತ್ತಾರೆ. ಕೆಲವರು ಮನೆಯಲ್ಲೇ ಮಾಡುವ ಕರಿದ ತಿಂಡಿಗಳನ್ನು ಸೇವಿಸುತ್ತಾರೆ.
ಅಂದಹಾಗೆ ಬಜ್ಜಿಯಲ್ಲಿ ಮೆಣಸಿನಕಾಯಿ ಬಜ್ಜಿಗೆ ಇರುವಷ್ಟು ಪ್ರಾಮುಖ್ಯತೆ ಉಳಿದ ಬಜ್ಜಿಗಳಿಗಿಲ್ಲ ಅಂದರೆ ತಪ್ಪಾಗಲ್ಲ. ಬಿಸಿ ಬಿಸಿ ಬಜ್ಜಿಯಲ್ಲಿ ಮೆಣಸಿನ ಖಾರ ನಾಲಿಗೆಗೆ ತಾಗಿದರೆ ಅದ್ರಲ್ಲೇನೋ ಮಜಾ. ಎಷ್ಟು ತಿಂದರೂ ಅದು ಸಾಕೆನಿಸುವುದಿಲ್ಲ.
ಖಾರವನ್ನು ತಿನ್ನಲು ಇಷ್ಟಪಡದವರು ಬಹುತೇಕ ಈರುಳ್ಳಿ ಬೊಂಡಾಕ್ಕೆ ಮಾರು ಹೋಗುತ್ತಾರೆ. ಈರುಳ್ಳಿ ಕರಿದಾಗ ಸಿಗುವ ಸ್ವಾದವನ್ನು ಆನಂದಿಸಲು ಇಷ್ಟಪಡುತ್ತಾರೆ. ಹೀಗಾಗಿ ಈರುಳ್ಳಿ ಬೊಂಡಾ ಅಥವಾ ಬಜ್ಜಿ ಕೂಡ ಮಳೆ ಚಳಿಗಾಲದಲ್ಲಿ ತಿನ್ನಲು ಮನಸ್ಸಾಗುತ್ತದೆ. ಹೀಗಾಗಿ ಮೆಣಸಿಕಾಯಿಗೆ ಇರುವಷ್ಟು ಬೇಡಿಕೆ ಇದಕ್ಕೂ ಇದೆ.
ಸಾಮಾನ್ಯವಾಗಿ ಆಲೂಗಡ್ಡೆಯಲ್ಲಿ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಅನ್ನು ತಿನ್ನುವವರ ಸಂಖ್ಯೆ ಅಧಿಕ. ಆದರೆ ಮಳೆ ಚಳಿ ಇದ್ದಾಗ ಕಡಲೇ ಹಿಟ್ಟಿನಲ್ಲಿ ಆಲೂ ಸ್ಲೈಸ್ ಅನ್ನ ಅದ್ದಿ ಕರಿದು ಮಾಡುವ ಆಲೂ ಬಜ್ಜಿಯಲ್ಲಿರುವ ರುಚಿ ಮತ್ತೊಂದರಲಿಲ್ಲ. ರುಚಿಗೆ ತಕ್ಕಷ್ಟು ಖಾರ ಉಪ್ಪು ಇದ್ದರೆ ಸಾಕು ಈ ಆಲೂ ಬಜ್ಜಿ ತಿನ್ನಲು ತುಂಬಾನೇ ಟೇಸ್ಟ್. ಹೀಗಾಗಿ ಆಲೂಬಜ್ಜಿ ಕೂಡ ಜನರ ಅಚ್ಚುಮೆಚ್ಚಿನ ಕರದ ಖಾದ್ಯವಾಗಿದೆ.
ಸಾಮಾನ್ಯವಾಗಿ ಹಲವಾರು ಬಗೆಯ ಬಜ್ಜಿಗಳನ್ನು ತಯಾರಿಸಲಾಗುತ್ತದೆ. ಕ್ಯಾಪ್ಸಿಕಂ ಬಜ್ಜಿ, ಬಾಳೆಕಾಯಿ ಬಜ್ಜಿ, ಬದನೇಕಾಯಿ ಬಜ್ಜಿ, ಹೀರೇಕಾಯಿ ಬಜ್ಜಿ, ಹಲಸಿನ ಕಾಯಿ ಬಜ್ಜಿ, ಹಗಲಕಾಯಿ ಬಜ್ಜಿ ಹೀಗೆ ಹೇಳ್ತಾ ಹೋದರೆ ಒಂದು ದೊಡ್ಡ ಪಟ್ಟಿ ಮಾಡಬಹುದು. ಒಟ್ಟಾರೆಯಾಗಿ ಕಾಲ ಕಾಲಕ್ಕೆ ತಕ್ಕಂತೆ ವಿವಿಧ ತರಹದ ಬಜ್ಜಿಗಳನ್ನ ಮಾಡಲಾಗುತ್ತದೆ