ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ರಕ್ಷಣೆ ಇಲ್ಲ. ರಾಜ್ಯದ ಹಿರಿಯ ಅಧಿಕಾರಿನ್ನು ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ ಅಂದರೆ ಇವರ ಉದ್ಧಟತನ ಎಷ್ಟಿದೆ ಅಂತ ಗೊತ್ತಾಗುತ್ತಿದೆ. ಈ ಘಟನೆಗೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆ (Prathima Murder Case) ವಿಚಾರದ ಕುರಿತು ಮಾತನಾಡಿದ ಅವರು, ಇಂತಹ ವಾತಾವರಣ ನಿರ್ಮಾಣ ಆದರೆ ಯಾವ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ? ಸಮಾಜಘಾತುಕ ಶಕ್ತಿಗಳಿಗೆ ಯಾವುದೇ ಲಂಗುಲಗಾಮು ಇಲ್ಲದಂತಾಗಿದೆ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಯಾವಯಾವ ಭಾಗದಲ್ಲಿ ಏನೇನು ನಡೆಯುತ್ತದೆ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ಇರುತ್ತದೆ. ಆದರೂ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಕಿಡಿಕಾರಿದರು.