ಧಾರವಾಡ: ಭಾರತ ದೇಶ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತ ಇದೆ. ಯುಪಿ, ಎಂಪಿ, ಛತ್ತಿಸಗಡ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಎರಡನೇ ಸ್ಥಾನದಲ್ಲಿವೆ. ಇದರ ಶ್ರೇಯಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವುದು ಬೇಡ ಎಂತಾದರೆ ದೇಶದಾದ್ಯಂತ ಗೋಶಾಲೆ ತೆರೆಯಲಿ. ಗೋಮಾಂಸ ರಫ್ತು ಮಾಡುವುದನ್ನು ಬ್ಯಾನ್ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಕೆಲವೊಂದಿಷ್ಟು ಜಾನುವಾರುಗಳನ್ನು ಹರಾಜು ಮಾಡುತ್ತಿರುವುದಕ್ಕೆ ಬಜರಂಗದಳ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಅವರು, ಗೋವಾ ಮತ್ತು ಮಣಿಪುರದಲ್ಲಿ ಗೋಮಾಂಸಕ್ಕೆ ಅವಕಾಶ ಕೊಟ್ಟಿದ್ದಾರೆ. ಚುನಾವಣೆ ಬಂದಿರುವ ಕಾರಣ ಏನೇನೋ ವಿಚಾರ ತರುತ್ತಿದ್ದಾರೆ ಎಂದರು.
ಬಿಹಾರದಲ್ಲಿ ಒಂದು ವಾರದಲ್ಲಿ 8.5 ಲಕ್ಷ ಶೌಚಾಲಯ ಕಟ್ಟಿಸಿದ್ದೇವೆ ಎಂದು ಬಿಜೆಪಿಯವರು ಹೇಳಿದ್ದಾರೆ. ಇದನ್ನು ನಂಬಲು ಸಾಧ್ಯವೇ? ಇರದೇ ಇರುವು ರೈಲ್ವೆ ನಿಲ್ದಾಣಗಳ ಪ್ರಸ್ತಾಪ ಮಾಡಿದ್ದಾರೆ. ರಾಣಿ, ದುರ್ಗಾ, ದೇವಿ ಸ್ಟೇಷನ್ ಅಂತೆಲ್ಲಾ ಹೇಳಿದ್ದಾರೆ. ಆ ಸ್ಟೇಷನ್ಗಳು ಭಾರತದಲ್ಲಿ ಇಲ್ಲ. ಆದರೂ ಬಿಜೆಪಿಯವರ ಪಿಕ್ಚರ್ ನಡೆಯುತ್ತಿದೆ ನಡೆಯಲಿ. ಬಜರಂಗದಳದವರು ಎಷ್ಟು ಜನ ಗೋವು ಸಾಕಿದ್ದಾರೆ ಎಂದು ಪ್ರಶ್ನಿಸಿದರು.