ರಿಪ್ಪನ್ಪೇಟೆ : ತಡರಾತ್ರಿ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡು ದಂಪತಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್. ಕುನ್ನೂರು ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ 8:00 ಗಂಟೆಯಿಂದ ಸುರಿದ ಬಿರುಗಾಳಿ ಸಹಿತ ಗುಡುಗು ಸಿಡಿಲಬ್ಬರದ ಧಾರಾಕಾರ ಮಳೆಗೆ ಹೆಚ್. ಕುನ್ನೂರು ಗ್ರಾಮದ ತಿಮ್ಮಪ್ಪ ಎಂಬುವವರ ಮನೆ ಮೇಲೆ ರಾತ್ರಿ 11 ರ ಸುಮಾರಿಗೆ ಮನೆ ಪಕ್ಕದಲ್ಲಿದ್ದ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದು ಈ ಘಟನೆಯಲ್ಲಿ ಆಶಾ ಕಾರ್ಯಕರ್ತೆ ವಿನೂತ, ತಿಮ್ಮಪ್ಪ ದಂಪತಿಗಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ ಸೇರಿದಂತೆ ದವಸ, ಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ವಸ್ತುಗಳು ನೀರುಪಾಲಾಗಿದ್ದು ಮನೆಗೆ ಹಾಕಿದ್ದ ಶೀಟ್, ಹೆಂಚುಗಳು ಸೇರಿದಂತೆ ಭಾಗಶಃ ಮನೆ ಜಖಂಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಸದಸ್ಯ ಮಂಜಪ್ಪ, ಪಿಡಿಒ ನಾಗರಾಜ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ಕೊಡಿಸುವ ಭರವಸೆ ನೀಡಿದ್ದಾರೆ.