ಚಿಕ್ಕಮಗಳೂರು;- ಗಣೇಶ ಪೂಜೆಗೆ ವಿರೋಧ ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗಣಪತಿ ಪೂಜೆ, ಪ್ರಾರ್ಥನೆ ಮೌಢ್ಯದ ಆಚರಣೆ ಎಂಬ ಹೇಳಿಕೆ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಶೋಭೆ ತರುವುದಿಲ್ಲ’ ಎಂದರು.
ಪಂಡಿತಾರಾಧ್ಯರ ಬಗ್ಗೆ ಅಪಾರ ಗೌರವವಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಈ ರೀತಿಯ ಸಣ್ಣ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಶುಭ ಕಾರ್ಯಗಳಲ್ಲಿ ಮೊದಲಿಗೆ ಗಣೇಶನ ಪೂಜೆ ಮಾಡಿದರೆ ಒಳ್ಳೆಯದು ಎಂದು ಜನ ನಂಬಿದ್ದಾರೆ. ಗಣೇಶನ ತಂದೆ ಶಿವನ ಪೂಜೆ ಮಾಡುತ್ತೀರಾ. ಗಣೇಶ ಏಕೆ ಬೇಡ, ನಿಮ್ಮ ತರ್ಕ ಏನು’ ಎಂದು ಪ್ರಶ್ನಿಸಿದರು. ವಚನಗಳನ್ನು ಹೇಳಬೇಕು, ಉಳಿಸಬೇಕು ಎಂಬುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗಣೇಶನ ಪೂಜೆ ವಿರೋಧಿಸುವುದು ಸಂವಿ ಧಾನ ವಿರೋಧಿಯಾಗುತ್ತದೆ. ಈ ಹೇಳಿಕೆಯನ್ನು ಶ್ರೀಗಳು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿರುವುದು ಹಿಂದೂ ಗಳನ್ನು ದ್ವೇಷಿಸುವ ಸರ್ಕಾರ. ಹುಲಿ ಉಗುರು ವಿಚಾರದಲ್ಲಿ ನೋಟಿಸ್ ನೀಡದೆ ಅರ್ಚಕರನ್ನು ಬಂಧಿಸಲಾಗಿದೆ. ಬಾಬಾಬುಡನಗಿರಿ ಸ್ವಾಮಿ ದರ್ಗಾದ ಶಾ ಖಾದ್ರಿ ಮನೆಯಲ್ಲಿ ಚಿರತೆ ಚರ್ಮ ಸಿಕ್ಕಿದ್ದರೂ ಬಂಧನ ಆಗಿಲ್ಲ. ಈ ರೀತಿಯ ನಾಟಕ ಸಹಿಸುವಂಥದ್ದಲ್ಲ. ಇದು ಬಹಳ ದಿನ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು.