ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿ, ಕುಂದಗೋಳ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದರು.
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಜಗದೀಶ ಶೆಟ್ಟರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಅವರ ‘ಕೈ’ ಹಿಡಿದರು. ಅವರ ಜೊತೆ, ಶಿಗ್ಗಾವಿ ಬಿಜೆಪಿಯ ಕೆಲವು ಮುಖಂಡರೂ ಕಾಂಗ್ರೆಸ್ ಸೇರಿದರು.
ಚಿಕ್ಕನಗೌಡರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಬಿಜೆಪಿಯಿಂದ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಜಗದೀಶ ಶೆಟ್ಟರ್ ಅವರು ಚಿಕ್ಕನಗೌಡರ ಅವರನ್ನು ಕಾಂಗ್ರೆಸ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಬೆಳಿಗ್ಗೆ ಭೇಟಿ ಮಾಡಿದ್ದ ಚಿಕ್ಕನಗೌಡರ, ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದರು.
ಕಾಂಗ್ರೆಸ್ ವರಿಷ್ಠರ ಸೂಚನೆಯಂತೆ ಬಿಜೆಪಿ, ಜೆಡಿಎಸ್ನ ಹಲವು ಮುಖಂಡರನ್ನು ಜಗದೀಶ ಶೆಟ್ಟರ್ ಅವರು ಸಂಪರ್ಕಿಸಿ ಕಾಂಗ್ರೆಸ್ಗೆ ಆಹ್ವಾನಿಸಿದ್ದಾರೆ. ಕೆಲವರ ಜೊತೆ ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಮಂದಿ ‘ಆಪರೇಷನ್ ಹಸ್ತ’ಕ್ಕೆ ಒಳಗಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.