ಚಳಿಗಾಲದಲ್ಲಿ ಒಡೆವ ಹಿಮ್ಮಡಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ. ಈ ಸಮಸ್ಯೆ ಸಣ್ಣದೆಂದು ಸಾಮಾನ್ಯರಿಗೆ ಅನಿಸಬಹುದು. ಆದರೆ ನಿಜವಾಗಿಯೂ ಈ ಸಮಸ್ಯೆ ಅನುಭವಿಸಿದವರಿಗಷ್ಟೇ ಅದರ ಗಂಭೀರತೆ ಅರ್ಥವಾಗುವುದು. ಯಾಕೆಂದರೆ, ಹಿಮ್ಮಡಿ ಒಡೆಯಲು ಒಮ್ಮೆ ಶುರುವಾದರೆ, ಚಳಿಗಾಲದ ತೀವ್ರತೆ ಹೆಚ್ಚಾಗುತ್ತಾ ಹೋದಂತೆಲ್ಲ, ಇದೂ ಕೂಡಾ ತೀವ್ರವಾಗುತ್ತಲೇ ಹೋಗುತ್ತದೆ.
ಪಾದಕ್ಕೆ ಸೂಕ್ತ ಕಾಳಜಿ ತೆಗೆದುಕೊಳ್ಳದೆ ಇದ್ದರೆ, ಹಿಮ್ಮಡಿ ಒಡೆದು ಒಡೆದು ಕೊನೆಗೆ ಪಾದದಿಂದ ರಕ್ತ ಜಿನುಗಲು ಆರಂಭವಾಗುತ್ತದೆ. ಆಗ ಕಾಲು ನೆಲದಲ್ಲಿ ಊರಲೂ ಸಾಧ್ಯವಾಗದಷ್ಟು ನೋವು. ಹಾಗಾಗಿ, ಚಳಿಗಾಲ ಬರುತ್ತಿದ್ದಂತೆ, ಈ ಸಮಸ್ಯೆ ಪ್ರತಿಬಾರಿ ಎದುರಿಸುವ ಮಂದಿ ಖಂಡಿತವಾಗಿಯೂ ತಮ್ಮ ಪಾದದ ಕುರಿತು ಗಂಭೀರವಾಗಿ ಕಾಳಜಿ ತೆಗೆದುಕೊಳ್ಳಲೇಬೇಕು. ಇಲ್ಲಿ ನಿರ್ಲಕ್ಷ್ಯ ಸಲ್ಲ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಪಾದಗಳ ಕಾಳಜಿ ಹೇಗೆ ಮಾಡಬೇಕು ಎಂಬುದನ್ನು ನೋಡೋಣ.
ನಿತ್ಯವೂ ಪಾದಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಒದ್ದೆ ಪಾದಗಳನ್ನು ಮೆದುವಾದ ಟವೆಲ್ನಿಂದ ಮೆತ್ತಗೆ ಒರೆಸಿಕೊಂಡು, ಗಾಳಿಯಾಡಲು ಬಿಡಿ. ಮಲಗುವ ಮುನ್ನ, ಒಡೆದ, ಬಿರುಕು ಬಿಟ್ಟ ಹಿಮ್ಮಡಿಗೆ ದಪ್ಪ ಕ್ರೀಮನ್ನು ಹಚ್ಚಿ. ಸಾಮಾನ್ಯ ಮಾಯ್ಶ್ಚರೈಸರ್ ಹಚ್ಚಿದರೆ, ಸಮಸ್ಯೆ ಬಗೆಹರಿಯದು. ನಿಮ್ಮ ಒಡೆದ ಪಾದಗಳಿಗೆಂದೇ ಮೆಡಿಕಲ್ ಶಾಫ್ನಲ್ಲಿ ಸಿಗುವ ಔಷಧಿಯುಕ್ತ ಮುಲಾಮನ್ನೋ, ಅಥವಾ ದಪ್ಪ ಕ್ರೀಮನ್ನೋ ಹಚ್ಚಿಕೊಂಡು ಸಾಕ್ಸ್ ಧರಿಸಿ ಮಲಗಿ. ಪೆಟ್ರೋಲಿಯಂ ಜೆಲ್ಲಿ ಅಥವಾ ಶಿಯಾ ಬಟರ್ ಇರುವ ಕ್ರೀಂ ಒಡೆದ ಹಿಮ್ಮಡಿಗೆ ಒಳ್ಳೆಯದು.
ಪಾದವನ್ನು ಬೆಚ್ಚಗಿನ ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ಮುಳುಗಿಸಿಡಬೇಕು. ಆಗ ಸತ್ತ ಚರ್ಮವನ್ನು ತೆಗೆಯಲು ಸುಲಭವಾಗುತ್ತದೆ. ಫ್ಯೂಮಿಸ್ ಕಲ್ಲಿನಿಂದ ಪಾದವನ್ನು ಉಜ್ಜಿ ಉಜ್ಜಿ ಸತ್ತ ಚರ್ಮವನ್ನು ತೆಗೆಯಿರಿ. ಅತಿಯಾಗಿ ನೋವಾಗುವವರೆಗೆ ಉಜ್ಜಬೇಡಿ. ಹಾಗೂ ಪದೇ ಪದೇ ಇದನ್ನು ಮಾಡಬೇಡಿ. ಇದಕ್ಕಾಗಿ ಪಾದಕ್ಕೆ ಸ್ಕ್ರಬ್ಬಿಂಗ್ ಕ್ರೀಮನ್ನು ಅಥವಾ ಸಕ್ಕರೆಯನ್ನು ಬಳಸಬಹುದು. ಹೀಗೆ ಸ್ಕ್ರಬ್ ಮಾಡಿದ ಮೇಲೆ ಪಾದವನ್ನು ಟವೆಲ್ನಲ್ಲಿ ಒರೆಸಿ ನಂತರ ಕ್ರೀಂ ಹಚ್ಚಿ ಆರೈಕೆ ಮಾಡಿ.
ನಿಮ್ಮ ಪಾದದ ಈ ಸಮಸ್ಯೆಗೆ ಕೇವಲ ಹೊರಗಿನ ಕಾರಣಗಳು ಮಾತ್ರವಲ್ಲ, ಒಳಗಿನ ಕಾರಣಗಳೂ ಇರುತ್ತವೆ. ಯಾಕೆಂದರೆ, ದೇಹ ಸರಿಯಾಗಿ ನೀರಿನಂಶ ಪಡೆಯದೆ ಇದ್ದರೆ, ಚರ್ಮ ಒಣಗುತ್ತದೆ. ಹಾಗಾಗಿ ಚಳಿಗಾಲದಲ್ಲೂ ಸಾಕಷ್ಟು ನೀರು ಕುಡಿಯಲೇಬೇಕು.
ಚಳಿಗಾಲದಲ್ಲಾದರೂ ಆದಷ್ಟು ಹಿಮ್ಮಡಿ ಮುಚ್ಚುವ ಶೂಗಳನ್ನು ಬಳಸಿ. ಶೂಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿ. ಬಹಳ ಟೈಟಾದ ಅಥವಾ ಬಹಳ ಲೂಸಾದ ಶೂಗಳನ್ನು ಧರಿಸಬೇಡಿ. ಶೂಗಳೊಳಗೆ ಸಾಕ್ಸ್ ಧರಿಸಿ.
ತೇವಾಂಶವನ್ನು ಹೀರಿಕೊಳ್ಳುವಂಥ ಸಾಕ್ಸ್ಗಳನ್ನು ಬಳಸಿ. ಸಾಕ್ಸ್ ಸರಿಯಾಗಿ ಒಣಗಿರಲಿ. ಸಾಕ್ಸ್ ಧರಿಸುವ ಮುನ್ನ ಪಾದವೂ ಸರಿಯಾಗಿ ಒಣಗಿರಲಿ. ಪಾದದ ಕ್ರೀಂ ಹಚ್ಚಿಕೊಂಡೇ ಸಾಕ್ಸ್ ಧರಿಸುವುದು ಒಳ್ಳೆಯದು.