ಗೂಗಲ್ ಮ್ಯಾಪ್ನ (Google Maps) ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ (Street View) ಫೀಚರ್ ಇದೀಗ ಇಡೀ ಭಾರತದಲ್ಲಿ (India) ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆಂಗಲ್ನಲ್ಲಿ ವೀಕ್ಷಿಸಬಹುದು.
2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ.
ಏನಿದರ ಉಪಯೋಗ?
ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಬಯಸಿದರೆ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಲು ಗೂಗಲ್ ಸ್ಟ್ರೀಟ್ ವ್ಯೂ (Google Street View) ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ ಪರಿಶೀಲಿಸಬೇಕಾಗಿಲ್ಲ. ಬದಲಿಗೆ ಕುಳಿತಲ್ಲಿಯೇ ನೀವು ನೋಡ ಬಯಸುವ ಪ್ರದೇಶದ ಚಿತ್ರವನ್ನು ಅದು ತೋರಿಸುತ್ತದೆ. ಈ ರೀತಿ ನೀವು ಮೊದಲೇ ಸ್ಥಳ ಪರಿಶೀಲನೆ ಮಾಡಿ ಬಳಿಕ ಆ ಪ್ರದೇಶಕ್ಕೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಬಹುದು.
ಬಳಸೋದು ಹೇಗೆ?
* ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಲು ನೀವು ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು.
* ಸರ್ಚ್ ಪಟ್ಟಿಯ ಅಡಿಯಲ್ಲಿ ಬಲ ಭಾಗದಲ್ಲಿ ಕಾಣಿಸುವ ಲೇಯರ್ ಬಾಕ್ಸ್ ಅನ್ನು ಆಯ್ಕೆ ಮಾಡಬೇಕು. ಅದರಲ್ಲಿ ಗೋಚರಿಸುವ ಸ್ಟ್ರೀಟ್ ವ್ಯೂ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಈಗ ನಿಮ್ಮ ಗೂಗಲ್ ಮ್ಯಾಪ್ನಲ್ಲಿ ನೀಲಿ ಬಣ್ಣದ ಗೆರೆಗಳನ್ನು ಗಮನಿಸಬಹುದು. ಈ ಗೆರೆಗಳು ಇರುವ ಪ್ರದೇಶಗಳನ್ನು ನೀವು ಕುಳಿತಲ್ಲಿಯೇ ಮೊಬೈಲಿನಲ್ಲಿ ವೀಕ್ಷಿಸಬಹುದು.
* ಈಗ ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಮ್ಯಾಪ್ನಲ್ಲಿ ಕಾಣಿಸುವ ಚಿಕ್ಕ ಚಿಕ್ಕ ವೃತ್ತಗಳನ್ನು ಕ್ಲಿಕ್ ಮಾಡಿದರೆ ಆ ಪ್ರದೇಶವನ್ನು ನೀವು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು.
* ನೀವು ಆ ಪ್ರದೇಶವನ್ನು ಇನ್ನಷ್ಟು ನಿಖರವಾಗಿ ಹಾಗೂ ಮುಂದಕ್ಕೆ, ಹಿಂದಕ್ಕೆ ಚಲಿಸಿ ವೀಕ್ಷಿಸಲು ಬಯಸಿದರೆ ಸ್ಕ್ರೀನ್ನಲ್ಲಿ ಕಾಣಿಸುವ ಬಾಣದ ಗುರುತುಗಳನ್ನು ಬಳಸಬಹುದು.
* ನೀವು ಆ ಚಿತ್ರವನ್ನು ಝೂಮ್ ಮಾಡಿಯೂ ನೋಡಬಹುದು. ಪರದೆಯ ಕೆಳ ಭಾಗದಲ್ಲಿ ಆ ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ ಎಂಬುದನ್ನು ನೀವು ನೋಡಬಹುದು.
* ನೀವು ಬ್ರೌಸರ್ನಲ್ಲಿ ಸ್ಟ್ರೀಟ್ ವ್ಯೂ ಬಳಸಲು ಬಯಸಿದರೆ, ಮೊದಲು ಗೂಗಲ್ ಕ್ರೋಮ್ ಅನ್ನು ತೆರೆಯಿರಿ. ಬಲ ಭಾಗದಲ್ಲಿ ಕಾಣಿಸುವ ಆ್ಯಪ್ಸ್ ಆಯ್ಕೆಯಲ್ಲಿ ಗೂಗಲ್ ಮ್ಯಾಪ್ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.
* ಈಗ ಕಾಣಿಸುವ ಮ್ಯಾಪ್ನ ಬಲ ಭಾಗದಲ್ಲಿ ಲೇಯರ್ನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸ್ಟ್ರೀಟ್ ವ್ಯೂ ಆಯ್ಕೆ ಕಾಣಿಸುತ್ತದೆ.
* ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಅಪ್ಲಿಕೇಶನ್ ಬಳಸಿದಂತೆಯೇ ಅನುಸರಿಸಿ.