ಬೆಂಗಳೂರು :- ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಇದೇ ವೇಳೆ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತುಕೊಂಡು ಜಾರಿಗೆ ತಂದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿದ್ದು ದೇಶದ ಗಮನ ಸೆಳೆದಿವೆ ಎಂದರು. ಈ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು ಉಂಟಾದೀತು, ಅಭಿವೃದ್ಧಿ ಕುಂಠಿತವಾದೀತು ಎಂಬ ಭವಿಷ್ಯ ಸುಳ್ಳಾಗಿದೆ. ಕರ್ನಾಟಕ ರಾಜ್ಯವು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನು ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುಗ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 2023ರಿಂದ ಪ್ರತಿ ಕುಟುಂಬದ ಯಜಮಾನಿಯರಿಗೆ ಮಾಸಿಕ 2000 ದರದಲ್ಲಿ ಒಟ್ಟು 35,180.20 ಕೋಟಿ ರೂ ನೆರವು ನೀಡಲಾಗಿದೆ. ಗೃಹಜ್ಯೋತಿಯಲ್ಲಿ 1.62 ಕೋಟಿ ಜನರಿಗೆ ಪ್ರಯೋಜನ ಸಿಕ್ಕಿದೆ. ಶಕ್ತಿ ಯೋಜನೆಯ ಅಡಿ 373.27 ಕೋಟಿ ಟ್ರಿಪ್ ಲಾಭ ಪಡೆಯಲಾಗಿದ್ದು,ಇದಕ್ಕೆ 9051 ಕೋಟಿ ರೂ ಹಣ ವೆಚ್ಚ ಮಾಡಲಾಗಿದೆ. ಯುವನಿಧಿ ಅಡಿ 1,24,176 ಜನ ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಅನ್ನಭಾಗ್ಯದ ಅಡಿ 4,48,12,382 ಫಲಾನುಭವಿಗಳಿಗೆ ಡಿಬಿಟಿ ಮೂಲಕ 9775.51 ಕೋಟಿ ರೂ ವರ್ಗಾವಣೆ ಮಾಡಲಾಗಿದೆ. ಈವರ್ಷ 13% ನಷ್ಟು ಹಣಕಾಸು ಬೆಳವಣಿಗೆ ಸಾಧಿಸಿದೆ ಎಂದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದರು.
ಸೈಬರ್ ಅಪರಾಧದ ಹಾವಳಿಯು ಒಂದು ಆಘಾತಕಾರಿ ವಿಷಯವಾಗಿದ್ದು, ರಾಜ್ಯದಲ್ಲಿ ಈಗ ವರದಿಯಾಗುತ್ತಿರುವ ಎಲ್ಲಾ ಅಪರಾಧ ಪ್ರಕರಣಗಳ ಒಟ್ಟು ಶೇಕಡಾವಾರು ಸೈಬರ್ ಅಪರಾಧಗಳು 10 ರಷ್ಟಿವೆ. ಅಪರಾಧಿಗಳನ್ಮು ಪತ್ತೆ ಹಚ್ಚಲು ಮತ್ತು ಶಿಕ್ಷಿಸಲು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡುವುದು. ಜನರಲ್ಲಿ ಅರಿವು ಮೂಡಿಸುವುದು ಪ್ರಮುಖ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಎಲ್ಲಾ ಹಂತಗಳಲ್ಲಿ ತರಬೇತಿ ಮತ್ತು ಅಗತ್ಯ ತಂತ್ರಜ್ಞಾನ ಒದಗಿಸುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು, 8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ ಸೇರಿ 1051 ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದರ ಜೊತೆಗೆ 114 ಪಿಎಸ್ಐ, 58 ಎಎಸ್ಐ, 80 ಸಿಬ್ಬಂದಿ, 30 ಕ್ಯಾಮೆರಾ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿದೆ.
ಬಂದೋಬಸ್ತ್ಗೆ 10 ಕೆಎಸ್ಆರ್ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.