ಮಕ್ಕಳ ಉತ್ತಮ ಭವಿಷ್ಯ ಎಲ್ಲ ಪಾಲಕರಿಗೆ ಮುಖ್ಯ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸ, ಮದುವೆ ಗಾಗಿ ಹಣ ಹೂಡಿಕೆ ಶುರು ಮಾಡ್ತಾರೆ. ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲೂ ಹಣ ಹೂಡಿಕೆ ಮಾಡಬಹುದು. ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯಲ್ಲಿ ಪಾಲಕರು ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮಕ್ಕಳಿಗೆ ಕೂಡ ಪಾಲಿಸಿ ತೆಗೆದುಕೊಳ್ಳುವುದು ಸುಲಭ.
ಅಂಚೆ ಕಚೇರಿಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಪಾಲಿಸಿಯಿದೆ. ಬಾಲ ಜೀವನ್ ಭೀಮಾ ಯೋಜನೆಯಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದು ತುಂಬಾ ಪ್ರಯೋಜನಕಾರಿ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇಂದು ನಾವು ಬಾಲ ಜೀವನ್ ಭೀಮಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡ್ತೇವೆ.
ಬಾಲ ಜೀವನ್ ಬೀಮಾ ಯೋಜನೆ : ಬಾಲ ಜೀವನ್ ಬಿಮಾ ಯೋಜನೆ ಅಂಚೆ ಕಚೇರಿ ಯೋಜನೆಯಾಗಿದೆ. ನೀವು ಇಲ್ಲಿ ಕನಿಷ್ಠ 6 ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ 3,00,000 ಪ್ರೀಮಿಯಂ ಪಾವತಿ ಮಾಡಬಹುದು. ಭಾರತ ಸರ್ಕಾರ ಈ ಮಕ್ಕಳ ಜೀವ ವಿಮಾ ಯೋಜನೆಯನ್ನು ಪ್ರತಿಯೊಬ್ಬ ನಾಗರಿಕರ ಬಗ್ಗೆ ಆಲೋಚನೆ ಮಾಡಿಯೇ ಶುರು ಮಾಡಿದೆ.
ಕುಟುಂಬದ ಇಬ್ಬರು ಮಕ್ಕಳು ಮಾತ್ರ ಈ ಯೋಜನೆ (Scheme) ಯ ಲಾಭ ಪಡೆಯಬಹುದು. ಮಗು ಜನಿಸಿದ ನಂತರ 5 ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ 18 ರೂಪಾಯಿ ಪಾವತಿ ಮಾಡಬೇಕು. ಅದೇ 20 ವರ್ಷಗಳವರೆಗಿನ ಯೋಜನೆಯನ್ನು ತೆಗೆದುಕೊಂಡಲ್ಲಿ ಅವರು ದಿನಕ್ಕೆ 6 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಮಕ್ಕಳ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವು 1,00,000 ರೂಪಾಯಿ ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂಪಾಯಿ ಆಗಿರುತ್ತದೆ. ಪಾಲಿಸಿದಾರ ಮಧ್ಯದಲ್ಲಿಯೇ ಸಾವನ್ನಪ್ಪಿದ್ರೆ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡ್ಬೇಕು ಅಂದ್ರೆ ಐದು ವರ್ಷ ಕಾಯಬೇಕು. ಐದುವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ.
ಮಕ್ಕಳ ಜೀವ ವಿಮಾ ಯೋಜನೆ ಅರ್ಹತಾ ಮಾನದಂಡ : ನಿಮ್ಮ ಮಕ್ಕಳಿಗಾಗಿ ಮಕ್ಕಳ ಜೀವ ವಿಮಾ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಅದಕ್ಕೆ ಕೆಲವು ಅರ್ಹತೆಗಳ ಅಗತ್ಯವಿರುತ್ತದೆ. ಅರ್ಜಿ ಸಲ್ಲಿಸಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೊದಲು ಮಗುವಿನ ವಯಸ್ಸು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ವಯಸ್ಸು 20 ವರ್ಷಗಳು. ಈ ಯೋಜನೆಯಡಿ ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಮಕ್ಕಳ ಜೀವ ವಿಮಾ ಯೋಜನೆಗೆ ಅಗತ್ಯವಿರುವ ದಾಖಲೆಗಳು : ಮಕ್ಕಳ ಜೀವ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವಾಗ, ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪೋಷಕರ ಆಧಾರ್ ಕಾರ್ಡ್,ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ? : ಮಕ್ಕಳಿಗೆ ಬಾಲ ಜೀವನ್ ಬೀಮಾ ಯೋಜನೆ ಪಡೆಯುತ್ತಿರುವ ಪಾಲಕರು ಮೊದಲು ಹತ್ತಿರದ ಅಂಚೆ ಕಚೇರಿಗೆ ಹೋಗಬೇಕು. ಅಲ್ಲಿ ಈ ಯೋಜನೆ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತ್ರ ಅಗತ್ಯವಿರುವ ದಾಖಲೆಯನ್ನು ಸೇರಿಸಬೇಕು. ಕೊನೆಯಲ್ಲಿ ಅರ್ಜಿ ಮತ್ತು ದಾಖಲೆಯನ್ನು ಸಂಬಂಧಿಸಿದ ಅಧಿಕಾರಿಗೆ ನೀಡಬೇಕು. ಅಧಿಕಾರಿಗಳು ಅರ್ಜಿ, ದಾಖಲೆ ಪರಿಶೀಲಿಸಿ ರಶೀದಿ ನೀಡುತ್ತಾರೆ.