ಗದಗ: ಆಂಧ್ರ ಸಿಎಂ ಜಗನ್ ಕ್ಷೇತ್ರದ ಜನರು ಇಡೀ ರಾತ್ರಿ ಆರ್ಟಿಓ ಕಚೇರಿಯಲ್ಲಿ ಕಾಲ ಕಳೆದಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಗೋಳಾಡಿರುವಂತಹ ಘಟನೆ ನಡೆದಿದೆ. ಹೌದು ಬಾಡಿಗೆ ಪಡೆದಿದ್ದ ಬಸ್ ಡಾಕ್ಯುಮೆಂಟ್ಸ್ ನಕಲಿರುವುದರಿಂದ ಆಂಧ್ರ ಪ್ರದೇಶದ ಪ್ರವಾಸಿಗರು ರಾಜ್ಯದಲ್ಲಿ ವಿಲವಿಲ ಅಂತಿದ್ದಾರೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಮೂಲದ 49 ಜನರು ಆಂಧ್ರ, ಕರ್ನಾಟಕ, ಗೋವಾ ಪ್ರವಾಸ ಕೈಕೊಂಡಿದ್ದರು.
ಸ್ಥಳೀಯವಾಗಿ ವೆಂಕಟಲಕ್ಷ್ಮೀನಾಯಾರಣ ಅನ್ನೋರ ಬಳಿ ಇದ್ದ AP03 TE8520 ನಂಬರಿನ ಬಸ್ ಬುಕ್ ಮಾಡಲಾಗಿತ್ತು. ಒಟ್ಟು 1 ಲಕ್ಷ 70 ಸಾವಿರ ರೂಪಾಯಿಗೆ ಪ್ರವಾಸ ಮಾಡಿಸೋದಾಗಿ ಬಸ್ ಮಾಲೀಕ ಒಪ್ಪಿಕೊಂಡಿದ್ದರು. ಮುಂಗಡವಾಗಿ 70 ಸಾವಿರ ರೂ. ಪಡೆದು ಹೈದ್ರಾಬಾದ್ ಪ್ರವಾಸ ಮಾಡಿಸಿ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದರು. ಗದಗ ನಗರ ಎಂಟ್ರಿಯಾಗ್ತಿದ್ದಂತೆ ಆರ್ಟಿಒ ಅಧಿಕಾರಿಗಳ ಕಣ್ಣಿಗೆ ಆಂಧ್ರ ಪಾಸಿಂಗ್ ಬಸ್ ಪರಿಶೀಲನೆ ನಡೆಸಿದ್ದಾರೆ.
ತಪಾಸಣೆ ಮಾಡಿದಾಗ ಚೆಸ್ಸಿ ನಂಬರ್ ಟ್ಯಾಂಪರ್ ಮಾಡಿರೋದು ಗೊತ್ತಾಗಿದೆ. ಸೀದಾ ಕಚೇರಿಗೆ ಬಸ್ ಕರೆಸಿ, ಇಂಜಿನ್ ನಂಬರ್ ಪರಿಶೀಲಿಸಲಾಗಿದೆ. ಇಂಜಿನ್ ನಂಬರ್ ಕೂಡ ತಿರುಚಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಅನುಮಾನಗೊಂಡು ಬಸ್ ಸೀಜ್ ಮಾಡಲಾಗಿದೆ. ಹೀಗಾಗಿ ಮಕ್ಕಳು ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ರಾತ್ರಿಯಿಂದ ಆರ್ಟಿಓ ಕಚೇರಿಯಲ್ಲಿ ವಾಸ್ತವ್ಯ ಹೊಡೆದಿದ್ದಾರೆ. ಬಸ್ನ ಅಸಲಿಯತ್ತು ಗೋತ್ತಾಗುತ್ತಿದ್ದಂತೆ ಪ್ರವಾಸಿಗಳು ಚಾಲಕ, ಬಸ್ ಮಾಲೀಕರ ವಿರುದ್ಧ ಕಿಡಿಕಾರಿದ್ದಾರೆ.