ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪುತ್ರಿ ಆರುಷಿ ನಿಶಾಂಕ್ಗೆ ಮುಂಬೈ ಮೂಲದ ದಂಪತಿ 4 ಕೋಟಿ ರೂ. ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ನಟಿ ಆರುಷಿ ನಿಶಾಂಕ್ ಡೆಹ್ರಾಡೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಂಬೈ ಮೂಲದ ಮಾನ್ಸಿ ಹಾಗೂ ವರುಣ್ ಬಾಂಗ್ಲಾ ದಂಪತಿ 4 ಕೋಟಿ ರೂ. ವಂಚಿಸಿದ್ದಾರೆ ಎಂದು ಆರುಷಿ ನಿಶಾಂಕ್ ಆರೋಪಿಸಿದ್ದಾರೆ. ತಮ್ಮ ನಿವಾಸಕ್ಕೆ ವರುಣ್ ದಂಪತಿ ಬಂದು ‘ಅಂಯೋಂ ಕಿ ಗುಸ್ತಾಖಿಯಾನ್’ ಚಿತ್ರದಲ್ಲಿ ಪಾತ್ರ ನೀಡೋದಾಗಿ ಹೇಳಿದ್ದರು. ಅದಕ್ಕಾಗಿ 5 ಕೋಟಿ ರೂ. ತಮಗೆ ಕೇಳಿದ್ದರು. ಚಿತ್ರ ರಿಲೀಸ್ ಆದ್ಮೇಲೆ ಬಂದ ಲಾಭದಲ್ಲಿ 20% ಸೇರಿ 15 ಕೋಟಿ ರೂ. ಕೊಡೋದಾಗಿ ಭರವಸೆ ನೀಡಿದ್ದರು. ಬಳಿಕ ತನ್ನಿಂದ ಸಿನಿಮಾಗೆ 4 ಕೋಟಿ ರೂ. ಹೂಡಿಕೆ ಮಾಡಿಸಿದ್ದರು. ಇದಕ್ಕೆ ಆರುಷಿ ಕೂಡ ಒಪ್ಪಿಕೊಂಡು 4 ಕಂತುಗಳಲ್ಲಿ 4 ಕೋಟಿ ರೂ. ನೀಡಿರೋದಾಗಿ ತಿಳಿಸಿದ್ದರು.
ನನ್ನ ಸ್ಕ್ರೀಪ್ಟ್ ಅನ್ನು ತಾವೇ ಫೈನಲ್ ಮಾಡುವುದಕ್ಕೂ ಅವಕಾಶವಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದರು. ಇನ್ನೂ ಈ ವರ್ಷ ಫೆಬ್ರವರಿ 2ರಂದು ಭಾರತದಲ್ಲಿ ಆಗಬೇಕಾದ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಲಾಗಿದ್ದು, ಉಳಿದ ಭಾಗವನ್ನು ಯುರೋಪಿನಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಮಾಡಲಾಗಿದೆ. ಆದ್ರೆ ನನ್ನನ್ನು ಆಯ್ಕೆ ಮಾಡಿದ್ದ ಸ್ಥಾನದಲ್ಲಿ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ನಟಿ ಆರೋಪಿಸಿದ್ದಾರೆ. ಪಾತ್ರವು ಇಲ್ಲ, ಇತ್ತ ತನ್ನ ಹಣ ಹಿಂದಿರುಗಿಸಿ ಕೊಡುವಂತೆ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ನಟಿ ಆರುಷಿ ನಿಶಾಂಕ್ ದೂರಿನ ಮೇಲೆ ಮಾನ್ಸಿ ವರುಣ್ ದಂಪತಿ ಕೇಸ್ ದಾಖಲಿಸಿಕೊಂಡು ಡೆಹ್ರಾಡೂನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.