ಉತ್ತರ ಪ್ರದೇಶ: ಇನ್ನು ಕೆಲವೇ ದಿನಗಳಲ್ಲಿ ರಾಮಮಂದಿರ (Ram Mandir) ಉದ್ಘಾಟನೆಯಾಗಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶ, ಜಗತ್ತಿನಲ್ಲಿರುವ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ಒಬ್ಬರು ಸರಸ್ವತಿ ದೇವಿ. ಈ ಮಹಿಳೆ ಕಳೆದ 30 ವರ್ಷಗಳಿಂದ ಆಚರಿಸುತ್ತ ಬಂದಿರುವ ಕಠಿಣ ವ್ರತ ಅಂತ್ಯವಾಗುವ ಸಮಯ ಬಂದಿದೆ. ರಾಮಭಕ್ತೆಯ ಮುಖದಲ್ಲಿ ಈಗ ಸಂತಸ ಮೂಡಿದೆ.
ಹೌದು, ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣ ಆಗುವವರೆಗೆ ಒಂದು ಮಾತನ್ನೂ ಆಡುವುದಿಲ್ಲ ಎಂದು ಸರಸ್ವತಿ ದೇವಿ ಕಳೆದ 30 ವರ್ಷಗಳ ಹಿಂದೆ ಪ್ರಮಾಣ ಮಾಡಿದ್ದರು. ಈ ಕಾರಣಕ್ಕಾಗಿ ಅವರು ಕಳೆದ 30 ವರ್ಷಗಳಿಂದ ಮೌನ ವ್ರತ ಆಚರಿಸಿದ್ದಾರೆ. ಇದೇ ಜನವರಿ 22 ರಂದು ಅವರ ಮೌನ ವ್ರತ ಅಂತ್ಯವಾಗಲಿದೆ.
ಎಲ್ಲಿಯವರು ಸರಸ್ವತಿ ದೇವಿ?
ಸರಸ್ವತಿ ದೇವಿ ಅವರು ಜಾರ್ಖಂಡ್ ಮೂಲದವರು. 1992ರ ಡಿಸೆಂಬರ್ 6 ರಂದು ರಾಮಲಲ್ಲಾ ಜನ್ಮಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸುವವರೆಗೆ ತನ್ನ ಬಾಯಿಂದ ಒಂದು ಮಾತನ್ನೂ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಈ ಪ್ರತಿಜ್ಞೆ ಮೂಲಕವೇ ಸರಸ್ವತಿ ದೇವಿ ಅವರು ‘ಮೌನಿ ಮಾತೆ’ ಎಂದೂ ಜನಪ್ರಿಯರಾಗಿದ್ದರು. ಬಾಬ್ರಿ ಮಸೀದಿ ಧ್ವಂಸದ ದಿನದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ದಿನ ತಮ್ಮ ವ್ರತ ಕೈಬಿಡಲಾಗುವುದು ಎಂದು ತಿಳಿಸಿದ್ದರು.
ಸಂಕೇತ ಭಾಷೆ ಬಳಕೆ
ಮೌನ ವ್ರತ ಕೈಗೊಂಡಿದ್ದ ಸರಸ್ವತಿ ದೇವಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ನೆರೆಹೊರೆಯ ಜನರೊಟ್ಟಿಗೆ ಮಾತನಾಡಲು ಸಂಕೇತ ಭಾಷೆ ಬಳುತ್ತಿದ್ದರು. ಸಂಜ್ಞೆಯ ಮೂಲಕ ಇತರರೊಂದಿಗೆ ಸಂವಹನ ನಡೆಸುತ್ತಿದ್ದರು. 2020 ರ ವರೆಗೆ ಅವರು ತಮ್ಮ ಮೌನ ವ್ರತದಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ವಿರಾಮ ತೆಗೆದುಕೊಂಡು ಮಾತನಾಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆ ನೆರವೇರಿಸಿದ ದಿನದಿಂದ ಸಂಪೂರ್ಣವಾಗಿ ಮೌನವಾಗಿದ್ದರು. ಅಂದಿನಿಂದ ಇಂದಿನವರೆಗೂ ಒಂದು ಮಾತನ್ನೂ ಆಡಿಲ್ಲ. ಅಂದಿನಿಂದ ಇಂದಿನವರೆಗೂ ಅವರು ಸಂಪೂರ್ಣ ಮೌನವಾಗಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಆಹ್ವಾನ
ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಶಿಷ್ಯರು ಸರಸ್ವತಿ ದೇವಿಯನ್ನು ಆಹ್ವಾನಿಸಿದ್ದಾರೆ. ಧನಬಾದ್ ನಿವಾಸಿಯಾಗಿರುವ ಸರಸ್ವತಿ ದೇವಿ ಅವರು ಸೋಮವಾರ ರೈಲಿನಲ್ಲಿ ಅಯೋಧ್ಯೆಗೆ ತೆರಳಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಉತ್ಸಾಹದಲ್ಲಿದ್ದಾರೆ.