ಬೆಳಗಾವಿ:- ಜಿಲ್ಲೆಯ ನಾವಗೆ ಗ್ರಾಮಕ್ಕೆ ನುಗ್ಗಿ 30 ಜನ ಮುಸುಕುಧಾರಿಗಳು ಅಟ್ಟಹಾಸ ಮೆರೆದಿರುವ ಘಟನೆ ಜರುಗಿದೆ. ಘಟನೆ ಸಂಬಂಧ 6 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರಕಾಸ್ತ್ರಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ. ಇದರಿಂದ ಮನೆಯ ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ್ದ ಟೈಲ್ಸ್ ಪುಡಿ ಪುಡಿಯಾಗಿವೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, ಆರು ಬೈಕ್ ಜಖಂಗೊಳಿಸಿದ್ದಾರೆ. ಈ ಮುಸುಕುಧಾರಿಗಳು ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮೇಲೂ ದಾಳಿ ಮಾಡಿದ್ದಾರೆ.
ಡಿಸೆಂಬರ್ 31ರ ರಾತ್ರಿ ಪ್ರೀತಿ ವಿಚಾರವಾಗಿ ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಈ ನಾವಗೆ ಗ್ರಾಮದ ಮುಖಂಡರು ಮತ್ತು ಪಂಚರು ಮಧ್ಯಪ್ರವೇಶಿಸಿ, ಯುವಕರಿಗೆ ಎರಡೇಟು ನೀಡಿ ಜಗಳ ಬಿಡಿಸಿದ್ದರು. ಇದಾದ ಬಳಿಕ ನಾವಗೆ ಗ್ರಾಮದ ಯುವಕರು ಬಾದರವಾಡಿ ಯುವಕರಿಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ವಾರ್ನಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾದರವಾಡಿ ಗ್ರಾಮದ ಯುವಕರು ನಾವಗೆ ಗ್ರಾಮಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪುಂಡರ ಅಟ್ಟಹಾಸ ಕಂಡು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.