ಬೆಂಗಳೂರು:- ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2023ರಲ್ಲಿ 30 ರಾಷ್ಟ್ರಗಳ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ನವೋದ್ಯಮಗಳ ಪ್ರತಿನಿಧಿಗಳು ಮತ್ತು ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಬಾರಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ‘ಬ್ರೇಕಿಂಗ್ ಬೌಂಡರೀಸ್- ಇನ್ನೋವೇಷನ್ ಫ್ರಂ ಇಂಡಿಯಾ ಇಂಪ್ಯಾಕ್ಟ್ ಫಾರ್ ವರ್ಲ್ಡ್’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ನಡೆಯಲಿದೆ. ಕಝಕಿಸ್ತಾನದ ಸಚಿವ ಬಗ್ದತ್ ಮುಸ್ಸಿನ್ ಹಾಗೂ ಇವಿಪಿ ಆಯಂಡ್ ಸಿಟಿಒ ಕಂಪನಿಯ ವ್ಯವಸ್ಥಾಪಕ ಮಾರ್ಕ್ ಪೇಪರ್ಮಾಸ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಗಣ್ಯರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಪ್ರೊ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೇರಿದಂತೆ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಂವಾದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಆವಿಷ್ಕಾರಗಳಿಗೆ ಸಂಬಂಧಿಸಿದ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.