ಜೈಪುರ: ಪಾಪ್ ಕಾರ್ನ್ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಹೌದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದ 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ತಿರ್ಮಾನ ತೆಗೆದುಕೊಳ್ಳಲಾಗಿದೆ.
ರುಚಿಗೆ ಅನುಗುಣವಾಗಿ ಜಿಎಸ್ಟಿಯ ವಿವಿಧ ಸ್ಲ್ಯಾಬ್ಗಳಲ್ಲಿ ಪಾಪ್ಕಾರ್ನ್ ಅನ್ನು ಸೇರಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಚಿತ್ರಮಂದಿರಗಳಲ್ಲಿ ಪಾಪ್ ಕಾರ್ನ್ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಪಾಪ್ ಕಾರ್ನ್ಮೇಲೆ ಒಂದಲ್ಲ ಮೂರು ರೀತಿಯ ಜಿಎಸ್ಟಿ ದರಗಳನ್ನ ವಿಧಿಸಲು ಕೌನ್ಸಿಲ್ ಸೂಚಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪಾಪ್ ಕಾರ್ನ್ಗಳನ್ನು ರುಚಿಗೆ ತಕ್ಕಂತೆ ವರ್ಗೀಕರಿಸಿ ವಿವಿಧ ಸ್ಲ್ಯಾಬ್ಗಳಲ್ಲಿ ತೆರಿಗೆಯನ್ನು ವಿಧಿಸಲಾಗಿದೆ.
ಯಾವುದು ಹಗ್ಗ? ಯಾವುದು ದುಬಾರಿ?
ಪಾಪ್ ಕಾರ್ನ್ ಮೇಲೆ ಜಿಎಸ್ಟಿ ವಿಧಿಸುವ ಪ್ರಸ್ತಾವನೆಗೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಅದರಂತೆ ಪಾಪ್ಕಾರ್ನ್ ಸೇರಿದಂತೆ ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ರೆಡಿ-ಟು-ಈಟ್ ತಿಂಡಿಗಳು 12% ಜಿಎಸ್ಟಿಗೆ ಒಳಪಟ್ಟಿರುತ್ತವೆ. ಏತನ್ಮಧ್ಯೆ, ಕ್ಯಾರಮೆಲೈಸ್ಡ್ ಪಾಪ್ಕಾರ್ನ್ (ಸಕ್ಕರೆಯಿಂದ ತಯಾರಿಸಿದ ಪಾಪ್ ಕಾರ್ನ್) ಮೇಲೆ 18% ಜಿಎಸ್ಟಿ, ಉಪ್ಪು ಮತ್ತು ಮಸಾಲೆಯುಕ್ತ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಪಾಪ್ಕಾರ್ನ್ಗೆ 5% ಜಿಎಸ್ಟಿ ಅನ್ವಯಿಸುತ್ತದೆ.
ಒಂದೇ ವರ್ಷದಲ್ಲಿ 1,200 ಕೋಟಿ ರೂ. ವ್ಯಾಪಾರ
ಪಾಪ್ಕಾರ್ನ್ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ದ ಉದ್ಯಮವಾಗಿ ಬೆಳೆದಿದೆ. ಕಳೆದ ವರ್ಷದ ಭಾರತದಲ್ಲಿ 1,200 ಕೋಟಿ ರೂ. ನಷ್ಟು ಪಾಪ್ಕಾರ್ನ್ ವ್ಯಾಪಾರವಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ವಿಶ್ವಾದ್ಯತಂತ ಮಾರುಕಟ್ಟೆಯಲ್ಲಿ 8 ಶತಕೋಟಿ ಡಾಲರ್ಗಿಂತಲೂ ಹೆಚ್ಚಯ ವ್ಯಾಪಾರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಗಳು ತಿಳಿಸಿವೆ.
ಅಲ್ಲದೇ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿಮೆಯಲ್ಲಿ ಜಿಎಸ್ಟಿ ವಿನಾಯತಿ ನೀಡುವ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ಸಭೆಯ ನಂತರ, ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
- ಹೆಚ್ಚು ಬೂದಿ ಮಿಶ್ರಿತ ಎಸಿಸಿ ಬ್ಲಾಕ್ (ಹಾಲೋಬ್ಲಾಕ್ ) ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 12ಕ್ಕೆ ಇಳಿಸಲಾಗಿದೆ.
- ಇ-ಕಾಮರ್ಸ್ ಮತ್ತು ಫುಡ್ ಡೆಲಿವರಿ (ಝೊಮ್ಯಾಟೋ, ಸ್ವಿಗ್ಗಿ ಇತ್ಯಾದಿ) ಸೇವೆಗಳ ಮೇಲೆ ತೆರಿಗೆ ವಿಧಿಸುವ ಸಂಬಂಧ ಚರ್ಚೆ ನಡೆದರೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
- ಖಾರ ಮತ್ತು ಉಪ್ಪು ಮಿಶ್ರಿತ ಪಾಪ್ ಕಾರ್ನ್ (ಪ್ಯಾಕ್ ಮಾಡದೇ ಇರುವ, ಬಿಡಿಯಾಗಿ ಮಾರಾಟ) ಮೇಲೆ ಶೇ. 5ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಪ್ಯಾಕ್ ಆಗಿರುವ ಪಾಪ್ ಕಾರ್ನ್ ಮೇಲೆ ಶೇ. 12 ತೆರಿಗೆ ಬೀಳಲಿದೆ. ಮಿಶ್ರಿತ ( caramel-coated) ಪಾಪ್ ಕಾರ್ನ್ ಮೇಲೆ ಶೇ. 18ರಷ್ಟು ತೆರಿಗೆ ಜಡಾಯಿಸಲಾಗಿದೆ.
- ಬಲವರ್ಧಿತ ಅಕ್ಕಿಕಾಳುಗಳ ಮೇಲಿನ ಜಿಎಸ್ಟಿ ಅನ್ನು ಶೇ.5ಕ್ಕೆ ಇಳಿಸಲಾಗಿದೆ. ಜೀನ್ ಥೆರಪಿಯನ್ನು ( ವೈದ್ಯಕೀಯ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಜೀನ್ ಬಳಸುವ ವೈದ್ಯಕೀಯ ತಂತ್ರಜ್ಞಾನ) ಸಂಪೂರ್ಣವಾಗಿ ತೆರಿಗೆ ಸ್ಲ್ಯಾಬ್ ನಿಂದ ಹೊರಗಿಡಲಾಗಿದೆ.