ಹುಬ್ಬಳ್ಳಿ:- ಇಲ್ಲಿನ ಹಳೇ ಮೂರಾರ್ಜಿ ನಗರದಲ್ಲಿ ಜೋಡಿಯೊಂದು ಆಟೋ ಡ್ರೈವರ್ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಲೋಕೇಶ ಹಾಗೂ ಆತನ ಹೆಂಡತಿಯ ತಂಗಿಯಾದ ಶಾಂತಿ ಎಂದು ಗುರುತಿಸಲಾಗಿದೆ. ಇವರಿಬ್ಬರ ನಡುವೆ ಹಲವು ದಿನಗಳಿಂದ ವಿವಾಹೇತರ ಸಂಬಂಧ ಇತ್ತು ಎಂಬ ಆರೋಪ ಇದೆ. ಹೀಗಾಗಿ ಇಬ್ಬರು ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಓಡಿ ಬಂದಿದ್ದರು ಎನ್ನಲಾಗಿದೆ.
ಹುಬ್ಬಳ್ಳಿಗೆ ಬಂದ ಈ ಜೋಡಿ ನಗರದಲ್ಲಿ ಅಟೋವೊಂದನ್ನು ಬಾಡಿಗೆ ಪಡೆದಿದ್ದಾರೆ. ಬಳಿಕ ಆಟೋದಲ್ಲೇ ಅಕ್ಷಯ ಪಾರ್ಕ್ ಹಾಗೂ ಇನ್ನಿತರ ಕಡೆ ಸುತ್ತಾಡಿ ಆಟೋ ಡ್ರೈವರ್ ಜೊತೆ ಪರಿಚಯ ಬೆಳೆಸಿಕೊಂಡಿದ್ದಾರೆ. ಈ ಜೋಡಿ ಆಟೋ ಚಾಲಕನಿಗೆ ಹೇಳಿ ಊಟವನ್ನು ತರಿಸಿಕೊಂಡಿದ್ದಾರೆ. ಪರಿಚಯವಾಗಿದ್ದರಿಂದ ಆಟೋ ಚಾಲಕ ಆ ಜೋಡಿಯನ್ನು ಮೂರಾರ್ಜಿ ನಗರದಲ್ಲಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ನಮ್ಮ ಮನೆಯಲ್ಲಿಯೇ ಊಟವನ್ನು ಮಾಡಿ ಎಂದು ಇವರಿಬ್ಬರಿಗೂ ಹೇಳಿ ತಾನು ಬೇರೆ ಪ್ಯಾಸೆಂಜರ್ನ್ನ ಬಿಡಲು ತೆರಳಿದ್ದಾನೆ.
ಪ್ಯಾಸೆಂಜರ್ ಬಿಟ್ಟು ಮನೆಗೆ ಬಂದು ನೋಡಿದಾಗ ಇಬ್ಬರೂ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂಡ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಮೃತದೇಹಗಳನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.