ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಅವರ 2023ನೇ ವರ್ಷದ ಬಹುತೇಕ ಸಂಕಲ್ಪಗಳು ಈಡೇರಿದ್ದು, ಅದನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಗಿಲ್ ಅವರು 2023ರ ಗುರಿಗಳನ್ನು ಫೋಟೋಗಳೊಂದಿಗೆ ಮೆಲುಕು ಹಾಕಿದ್ದಾರೆ. ಕೇವಲ 24 ವರ್ಷಕ್ಕೆ ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿರುವ ಗಿಲ್, ಎಲ್ಲ ಮಾದರಿಯ ಪಂದ್ಯಗಳಲ್ಲೂ ತಂಡಕ್ಕೆ ಅನಿವಾರ್ಯ ಆಟಗಾರ ಎನಿಸಿಕೊಂಡಿದ್ದಾರೆ. ಗಿಲ್, ವೃತ್ತಿ ಜೀವನದ ಪಾಲಿಗೆ 2023 ಮಹತ್ವದ ವರ್ಷವಾಗಿದೆ. ಈ ವರ್ಷದಲ್ಲಿ ಎಲ್ಲ ಮಾದರಿ ಪಂದ್ಯಗಳಿಂದ 7 ಶತಕಗಳೊಂದಿಗೆ 2 ಸಾವಿರಕ್ಕೂ ಅಧಿಕ ರನ್ ಕಲೆ ಹಾಕುವ ಮೂಲಕ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ.
2023ರಲ್ಲಿ ಗಿಲ್ ಅವರು ಕೆಲವೊಂದಿಷ್ಟು ಗುರಿಗಳನ್ನು ಹಾಕಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಗುರಿಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಬೇಕೆಂಬುದು ಪ್ರಮುಖ ಗುರಿಯಾಗಿತ್ತು. ಅದು ಕೂಡ ನೆರವೇರಿದೆ. ಅಲ್ಲದೆ, ಗಿಲ್ ಅವರು ವಿಶ್ವಕಪ್ ಮತ್ತು ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮೇಲೆ ತಮ್ಮ ಕಣ್ಣಿಟ್ಟಿದ್ದರು. ಎರಡೂ ಪಂದ್ಯಾವಳಿಗಳಲ್ಲಿ ಗಮನಾರ್ಹ ಪ್ರಭಾವ ಬೀರಲು ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದರು.