ಮಂಡ್ಯ:- ಜಿಲ್ಲೆಯ ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧ ಪುನರುಜ್ಜೀವನ ಮಾಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ತಾವು ಸಲ್ಲಿಸಿದ ಮನವಿಗೆ ಸಿಎಂ ಸ್ಪಂದಿಸಿ, ಸ್ಮಾರಕದ ನವೀಕರಣಕ್ಕೆ ಕ್ರಮ ವಹಿಸಿದ್ದು, ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದು ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1937 ರಲ್ಲಿ ಶಿವಪುರದಲ್ಲಿ ಹೋರಾಟಗಾರರಾದ ಎನ್.ವೀರಣ್ಣ ಗೌಡ, ಕೊಪ್ಪದ ಜೋಗಿ ಗೌಡ, ಸಾಹುಕಾರ ಚೆನ್ನಯ್ಯ ನೇತೃತ್ವದಲ್ಲಿ ನಡೆದಿದ್ದ ಹೋರಾಟದ ನೆನಪಿಗೆ ಅಲ್ಲಿ ಸೌಧ ನಿರ್ಮಾಣ ಮಾಡಲಾಗಿತ್ತು. ಆದರೆ, ಸೌಧ ನಿರ್ವಹಣೆ ಇಲ್ಲದೇ ಹಾಳು ಬಿದ್ದಿವೆ. ಸ್ಮಾರಕದ ಒಳಗಡೆ ಇರುವ ಚಿತ್ರಪಟಗಳು ಹಾಳಾಗಿವೆ. ಉದ್ಯಾನವನ ನಿರ್ವಹಣೆ ಇಲ್ಲದೇ ಸೊರಗಿದೆ. ಸಂಗೀತ ಕಾರಂಜಿ ನೃತ್ಯ ನಿಲ್ಲಿಸಿ ತುಕ್ಕು ಹಿಡಿದಿದೆ. ಸ್ಮಾರಕ ಭವನದ ಒಳಗೆ ಧೂಳು ತುಂಬಿಕೊಂಡಿದೆ. ಭವನದ ಬಾಗಿಲು ಸದಾ ಹಾಕಿಕೊಂಡಿರುವುದರಿಂದ ಪ್ರವಾಸಿಗರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ದಿನೇಶ ಗೂಳಿಗೌಡ ಅವರು ಸಮಸ್ಯೆಯನ್ನು ವಿವರಿಸಿ ಸಿಎಂ ಅವರಿಗೆ ಸೆ.9 ರಂದು ಪತ್ರ ಬರೆದಿದ್ದರು.
ಪತ್ರದಲ್ಲೇನಿತ್ತು..?
ಮದ್ದೂರು ತಾಲೂಕಿನ ಶಿವಪುರದ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧವು ಮಂಡ್ಯ ಜಿಲ್ಲೆಯ ಹೆಮ್ಮೆಯಾಗಿದೆ. ಮೈಸೂರು, ಬೆಂಗಳೂರು, ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಸ್ಮಾರಕವು ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿದೆ. ಆದರೆ, ಭವನ ಇಂದು ಹಾಳು ಕೊಂಪೆಯಾಗಿದೆ. ಹಾಗಾಗಿ ಸ್ಮಾರಕ ರಕ್ಷಣೆಗೆ ಕ್ರಮ ವಹಿಸಬೇಕು. ಕಟ್ಟಡ ದುರಸ್ತಿ ಮಾಡಿ, ಹರಿದ ಚಿತ್ರ ಪಟಗಳನ್ನು ಬದಲಿಸಬೇಕು. ಸ್ಮಾರಕ ಭವನ ನಿರ್ವಹಣೆಗೆ ಸಿಬ್ಬಂದಿ, ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಕಾಯಮಾಗಿ ಬಾಗಿಲು ತೆರೆದು ಪ್ರವಾಸಿಗರ, ವಿದ್ಯಾರ್ಥಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು.ಸ್ಮಾರಕದ ಉದ್ಯಾನವನ, ಸಂಗೀತ ಕಾರಂಜಿ ಪುನರುಜ್ಜೀವನ ಮಾಡಬೇಕು. ಇದಕ್ಕೆಲ್ಲ 2 ಕೊಟಿ ರೂ. ನೀಡುವಂತೆ ದಿನೇಶ ಗೂಳಿಗೌಡ ಅವರು ಸಿಎಂಗೆ ಮನವಿ ಮಾಡಿದ್ದರು.
ಸ್ಮಾರಕದ ಅಪೂರ್ವ ಇತಿಹಾಸ ದಿನೇಶ ಗೂಳಿಗೌಡ ಅವರು ಬರೆದ ಪತ್ರದಲ್ಲಿ ಸ್ಮಾರಕರ ಇತಿಹಾಸ, ಅದರ ಮಹತ್ವವನ್ನು ಮನಮುಟ್ಟುವಂತೆ ವಿವರಿಸಲಾಗಿತ್ತು. ಸ್ವಾತಂತ್ರ್ಯಾ ಪೂರ್ವ ಹೋರಾಟದಲ್ಲಿ ಶಿವಪುರ ಧ್ವಜ ಸತ್ಯಾಗ್ರಹದ ಪಾತ್ರ ಅವಿಸ್ಮರಣೀಯ. ಇತಿಹಾಸದ ಪುಟಗಳಲ್ಲಿ ಇದು ಅಜರಾಮರವಾಗಿದೆ. ಇಂಥ ಒಂದು ಸತ್ಯಾಗ್ರಹ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಾಗಿದೆ ಎಂಬುದು ಹೆಮ್ಮೆ ತರುವ ವಿಷಯವಾಗಿದೆ.
ಅದು 1937ರ ಸಮಯ ಆಗಿನ ಬ್ರಿಟಿಷ್ ಸರ್ಕಾರವು ಮ್ಯಾಜಿಸ್ಪ್ರೇಟ್ ಅನುಮತಿಯಿಲ್ಲದೆ ಸಭೆ ಮೆರವಣಿಗೆಗಳು ನಡೆಸಬಾರದೆಂದು ಫರ್ಮಾನು ಹೊರಡಿಸಿತು. ಇದು ಮೈಸೂರು ಸಂಸ್ಥಾನದ, ಜನರ ಆಕ್ರೋಶಕ್ಕೆ ಕಾರಣವಾಯಿತು.
ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಕಿಚ್ಚು ನೀಡಿದ ಬ್ರಿಟಿಷ್ ಸರ್ಕಾರದ ನಡೆಯಿಂದ 1938ರ ಶಿವಪುರದ ಧ್ವಜ ಸತ್ಯಾಗ್ರಹಕ್ಕೆ ನಾಂದಿ ಹಾಡಿತು. ಅಂದರೆ, ಸರ್ಕಾರದ ನೀತಿಯಿಂದ ಸಂಸ್ಥಾನದ ಜನತೆ ಕೆರಳಿ ಪ್ರತಿಬಂಧಕಾಜ್ಞೆ ಮುರಿದು ಸಂಸ್ಥಾನದ ಎಲ್ಲೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿವಸವನ್ನು ಆಚರಿಸಲು ಮುಂದಾದರು.
1938ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಕಾಂಗ್ರೆಸ್ ಮೊದಲ ಅಧಿವೇಶನವನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರ ಗ್ರಾಮದಲ್ಲಿ ಮಾಡಲು ನಿರ್ಧರಿಸಿತು. ಏಪ್ರಿಲ್ 11 ರಂದು ಟಿ.ಸಿದ್ಧಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದಲ್ಲದೆ, ಸ್ವಾತಂತ್ರ್ಯದ ಸಂಕೇತವಾದ ತ್ರಿವರ್ಣ ಧ್ವಜವನ್ನು ಸಹ ಹಾರಿಸಲಾಯಿತು. ಇದು ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೂ ಗುರಿಯಾಯಿತು. ಕೆ.ಸಿ.ರೆಡ್ಡಿ, ಕೆ.ಟಿ.ಭಾಷ್ಯಂ ಅವರಂತಹ ನೂರಾರು ಮಹನೀಯರು ಪಾಲ್ಗೊಂಡಿದ್ದರು. ಆಗಿನ ಸರ್ಕಾರದ ಆದೇಶದಂತೆ ಪೊಲೀಸರು ಲಾಠಿ ಬೀಸಿದರು. ಇಷ್ಟಾದರೂ ಜಗ್ಗದ ಸಾವಿರಾರು ಮಂದಿ ಹೋರಾಟ ನಡೆಸಿದರು.
ಇದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಕ ಶಕ್ತಿ ಎಂದೂ ಹೇಳಬಹುದಾಗಿದೆ. ರಾಜ್ಯದ ವಿವಿಧ ಭಾಗದಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೊತ್ತಿಕೊಳ್ಳಲೂ ಕಾರಣವಾಯಿತು.
ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಇದರ ಹಿಂದೆ ಸಾಕಷ್ಟು ಕೆಲಸವನ್ನು ಮಾಡಿತ್ತು. ಎಲ್ಲೆಡೆ ಸುದ್ದಿಯನ್ನು ಹರಡಿದ್ದಲ್ಲದೆ, ಸಮಾವೇಶಕ್ಕೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಜಿಲ್ಲೆಗಳ ಜನರು ಸಮಾವೇಶಕ್ಕೆ ಬರುವಂತೆ ನೋಡಿಕೊಂಡಿತು. ಹೀಗೆ ಜನರಿಂದ ಜನರಿಗೆ ಸುದ್ದಿಗಳು ಹರಡಿ ಸ್ವಾತಂತ್ರ್ಯ ಹೋರಾಟದ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿತು.
ಸೌಧ ನಿರ್ಮಾಣ
ಶಿವಪುರ ಧ್ವಜ ಸತ್ಯಾಗ್ರಹದ ಸವಿ ನೆನಪಿಗಾಗಿ ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿದ್ದು, ಇದನ್ನು 1979ರ ಸೆಪ್ಟೆಂಬರ್ 26ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಮತ್ತು ಕೆಂಗಲ್ ಹನುಮಂತಯ್ಯ ಅವರು ಉದ್ಘಾಟಿಸಿದರು.
ಹಿಂದೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಗ್ರಂಥಾಲಯಕ್ಕೆಂದು ಸ್ಮಾರಕ ಭವನ ನಿರ್ಮಿಸಿದ್ದು ಬಿಟ್ಟರೆ, ಬೇರೆ ಕಾರ್ಯವಾಗಿಲ್ಲ. ಇದರಿಂದ ಈಗ ಸ್ಮಾರಕ ಭವನ ಪುನರುಜ್ಜೀವನ ಮಾಡಬೇಕು ಎಂದು ಎಂದು ದಿನೇಶ ಗೂಳಿಗೌಡ ವಿನಂತಿಸಿದ್ದರು