ಹುಬ್ಬಳ್ಳಿ,: ಮೂವತ್ತು ವರ್ಷಗಳ ಹಿಂದಿನ ಹುಬ್ಬಳ್ಳಿ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ ಬಗ್ಗೆ ಸರ್ಕಾರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್ಗಳಲ್ಲಿ, 15 ರಲ್ಲಿ ಅವರು ಖುಲಾಸೆಯಾಗಿದ್ದಾರೆ. ಖುಲಾಸೆಯಾಗಿರುವ ವ್ಯಕ್ತಿಯನ್ನು ಅಪರಾಧಿ ಎಂದು ಹೇಳುವುದು ತಪ್ಪು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಖುಲಾಸೆಯಾಗಿ ಬಿಡುಗಡೆ ಆಗಿರುವ ವ್ಯಕ್ತಿಯನ್ನು ಅಪರಾಧಿ ಎನ್ನುವುದು ತಪ್ಪು. ಸರ್ಕಾರ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿಲ್ವಾ? ಅವರನ್ನು ಅಪರಾಧಿ ಎನ್ನಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಮುಂದಿನ ಹೋರಾಟದ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಅದರಂತೆ ಮುಂದಿನ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು. ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಬಿಜೆಪಿ ಟಿಕೆಟ್ ನೀಡಲಿ ಎಂಬ ಕಾಂಗ್ರೆಸ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಟೆಂಗಿನಕಾಯಿ, ಹಾಗಿದ್ದರೆ ಇವತ್ತು ಕಾಂಗ್ರೆಸ್ನ ನಿಲುವೇನು? ಅವರು ಮಾಡಿರುವ ತಪ್ಪಿಗೆ ಅವರು ರಾಮ ಭಕ್ತನಿಗೆ ಟಿಕೆಟ್ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ, ಗೃಹ ಸಚಿವರು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ಇದಕ್ಕೆ ಯಾರ ತಲೆದಂಡವಾಗಲಿದೆ ಎಂದು ಅವರು ಪ್ರಶ್ನಿಸಿದರು. ಬಿಜೆಪಿಯವರ ವಿರುದ್ಧ ದೂರು ನೀಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀವು (ಕಾಂಗ್ರೆಸ್ನವರು) ಸತ್ಯವನ್ನು ಮುಚ್ಚಿಟ್ಟೀದ್ದೀರಿ. ನಾವೂ ನಾವು ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಾಡುತ್ತೇವೆ. ನಿರಪರಾಧಿಯನ್ನು ಅಪರಾಧಿ ಅನ್ನೋ ಸತ್ಯ ಮುಚ್ಚಿಟ್ಟಿದ್ದಕ್ಕೆ ನಾವು ಎಲ್ಲರೂ ಸೇರಿ ದೂರು ನೀಡುತ್ತೇವೆ. ಒಂದು ಕಡೆ ಕೋಮು ಗಲಭೆ ಮಾಡಿದವರ ಪರ ಮಾತಾಡ್ತೀರಿ ಎಂದು ಟೆಂಗಿನಕಾಯಿ ಟೀಕಿಸಿದರು.