ಗದಗ: ಗದಗ ಜಿಲ್ಲೆಯ ಪ್ರತಿಷ್ಠಿತ ಜಿಮ್ಸ್ ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದ್ದು ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುತ್ತ ಆ ಭಾಗದ ಬಡ ಜನರ ಸಂಜೀವಿನಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಒಳ್ಳೆಯ ಆಸ್ಪತ್ರೆಯಾಗಿರುವ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಶಾಲಿಟಿ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭವಾಗಿದೆ. ಇದು ಸಚಿವ ಎಚ್.ಕೆ.ಪಾಟೀಲ್ ಅವರ ಕನಸಿನ ಯೋಜನೆಯಾಗಿದೆ.
ಕ್ಯಾಥ್ ಲ್ಯಾಬ್ ಉತ್ತರ ಕರ್ನಾಟಕ ಭಾಗದ ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಹಾವೇರಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಯ ಹೃದಯ ಸಂಬಂಧಿ ರೋಗಿಗಳಿಗೆ ಅನುಕೂಲವಾಗಲಿದೆ. ನೆದರಲ್ಯಾಂಡ್ ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಯಂತ್ರವನ್ನ ತರಿಸಲಾಗಿದ್ದು ಇದು ಕರ್ನಾಟಕದಲ್ಲೇ ಅಡ್ವಾನ್ಸ್ ಟೆಕ್ನಾಲಜಿ ಹೊಂದಿದ ಕ್ಯಾಥ್ ಲ್ಯಾಬ್ ಆಗಿದೆ. ಸೂಪರ್ ಸ್ಪೆಶಾಲಿಟಿ ಹೃದ್ರೋಗ ಚಿಕಿತ್ಸಾ ಘಟಕದಲ್ಲಿ ಓಪನ್ ಹಾರ್ಟ್ ಸರ್ಜರಿ ಸೌಲಭ್ಯ, ಸ್ಟಂಟ್ ಅಳವಡಿಕೆ, ಹಾರ್ಟ್ ಬಲೂನಿಂಗ್ ಸರ್ಜರಿ, ಹಾರ್ಟ್ ವಾಲ್ಟ್ ಸರ್ಜರಿ ಹಾಗೂ ಇನ್ನಿತರೆ ಹೃದಯ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಮಾಡಬಹುದಾಗಿದೆ.
ಬಳ್ಳಾರಿ ಬಿಮ್ಸ್ ನಲ್ಲಿ ಮತ್ತೊಬ್ಬ ಬಾಣಂತಿ ಸಾವು ; ವೈದ್ಯರ ನಿರ್ಲಕ್ಷ್ಯ ಆರೋಪ
ಇನ್ನು ಬಿಪಿಎಲ್ ಪಡಿತರ ಚೀಟಿ ಹೊಂದಿದ ಹಾಗೂ ಎಸ್ ಸಿ, ಎಸ್ ಟಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೃದಯ ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸೋ ಪರಿಸ್ಥಿತಿ ಇತ್ತು. ಇದೀಗ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿದ ಕ್ಯಾಥ್ ಲ್ಯಾಬ್ ಪ್ರಾರಂಭವಾಗಿರೋದ್ರಿಂದಾಗಿ ಬಡ ರೋಗಿಗಳಿಗೆ ಅನುಕೂಲ ಆಗಿದೆ. ಇದೇ ಫೆ. 3 ರಂದು ಕ್ಯಾಥ್ ಲ್ಯಾಬ್ ಉದ್ಘಾಟನೆಗೊಳ್ಳುತ್ತಿದ್ದು ಹೃದಯ ಸಂಬಂಧಿ ರೋಗಿಗಳಿಗೆ ಭರವಸೆ ಮೂಡಿಸಿದೆ.