ಬಾಲಿವುಡ್ ನಟ ಸೈಫ್ ಅಲಿ ಖಾನ್ ದುಷ್ಕರ್ಮಿಯ ಹಲ್ಲೆಯಿಂದ ಗಾಯಗೊಂಡಿದ್ದು ಇದೀಗ ಶಸ್ತ್ರ ಚಿಕಿತ್ಸೆಯ ಬಳಿಕ ಸುಧಾರಿಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ರನ್ನು ಆಟೋ ಚಾಲಕ ಭಜನ್ ಸಿಂಗ್ ರಾಣ ಆಸ್ಪತ್ರೆಗೆದಾಖಲು ಮಾಡಿದ್ದರು. ಇದೀಗ ಆಟೋ ಚಾಲಕನಿಗೆ ಎಲ್ಲರಿಂದ ಪ್ರಶಂಸೆಯ ಸುರಿಮಳೆ ಆಗುತ್ತಿವೆ.
ಸೈಫ್ ಜೀವ ಉಳಿಸಿದ ಆಟೋ ಚಾಲಕನ ಬಗ್ಗೆ ಗಾಯಕ ಮಿಕಾ ಸಿಂಗ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ಭಾರತದ ಅಚ್ಚುಮೆಚ್ಚಿನ ಸೂಪರ್ ಸ್ಟಾರ್ ನಟನ ಜೀವ ಉಳಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಕನಿಷ್ಠ 11 ಲಕ್ಷ ರೂಪಾಯಿ ಬಹುಮಾನವಾದರೂ ಸಿಗಬೇಕು. ಅವರ ಧೈರ್ಯದ ಕೆಲಸ ನಿಜಕ್ಕೂ ಶ್ಲಾಘನೀಯ. ಸಾಧ್ಯವಾದರೆ ಅವರನ್ನು ಸಂಪರ್ಕಿಸುವುದು ಹೇಗೆ ಎಂಬ ಮಾಹಿತಿಯನ್ನು ನನ್ನ ಬಳಿ ಹಂಚಿಕೊಳ್ಳಿ. ಮೆಚ್ಚುಗೆಯ ರೂಪದಲ್ಲಿ ನಾನು ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲು ಬಯಸುತ್ತೇನೆ’ ಎಂದು ಮಿಕಾ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.
ಜನವರಿ 16ರ ಮುಂಜಾನೆ 2.30ರ ಸುಮಾರಿಗೆ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಕಳ್ಳ ತನ್ನನ್ನು ಹಿಡಿಯಲು ಬಂದ ಸೈಫ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ರನ್ನು ಆಸ್ಪತ್ರೆಗೆ ದಾಖಲು ಮಾಡಲು ಅವರ ಮಗ ಮುಂದಾಗಿದ್ದಾರೆ. ಆದರೆ ಆ ವೇಳೆ ಯಾವುದೇ ಕಾರು ಸಿದ್ದವಿರಲಿಲ್ಲ.ಹೀಗಾಗಿ ಸೈಫ್ ಮನೆ ಕೆಲಸದ ಮಹಿಳೆಯು ಮಧ್ಯ ರಸ್ತೆಗೆ ಬಂದು ಆಟೋ ಆಟೋ ಎಂದು ಕೂಗಿದ್ದು ಈ ವೇಳೆ ಚಾಲಕ ಭಜನ್ ಸಿಂಗ್ ರಾಣ ಬಂದು ಸೈಫ್ ಅಲಿ ಖಾನ್ ರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.