ಶಸ್ತ್ರಚಿಕಿತ್ಸೆ ಬಳಿಕ ಅಮೆರಿಕದಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶಿವರಾಜ್ಕುಮಾರ್ ನಾಳೆ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಈ ಬಗ್ಗೆ ವೀಡಿಯೋ ಮೂಲಕ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಬರುವ ಬಗ್ಗೆ ನಟ ಶಿವಣ್ಣ ವೀಡಿಯೋ ಮಾಡಿ ಫ್ಯಾನ್ಸ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಚಿರಋಣಿ ಎಂದು ಅಭಿಮಾನಿಗಳಿಗೆ ನಟ ಕೃತಜ್ಞತೆ ಸಲ್ಲಿಸಿದ್ದಾರೆ.
‘ಹಾಯ್.. ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜ್ಕುಮಾರ್. ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮೆಲ್ಲರನ್ನೂ ನೋಡುವುದಕ್ಕೆ ನಾನು ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ಬರುತ್ತಿದ್ದೇನೆ’ ಎಂದು ಅಭಿಮಾನಿಗಳಿಗೆ ನಟ ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವರಾಜ್ಕುಮಾರ್ ಅವರು ಈಚೆಗೆ ಅಮೆರಿಕಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯುಎಸ್ನ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಕೆಲವು ದಿನಗಳ ಕಾಲ ಅಲ್ಲೇ ಉಳಿದು ವಿಶ್ರಾಂತಿ ಪಡೆದರು. ಈ ವೇಳೆ ಸ್ನೇಹಿತರು, ಆಪ್ತರು, ಅಭಿಮಾನಿಗಳ ಜೊತೆ ಒಡನಾಡಿ ಎಂಜಾಯ್ ಮಾಡಿದರು. ಅಮೆರಿಕದಲ್ಲಿ ಶಿವಣ್ಣನ ಜೊತೆ ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡ ಇದ್ದಾರೆ. ಈಗ ನಟ ಸಂಪೂರ್ಣ ಚೇತರಿಸಿಕೊಂಡಿದ್ದು, ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಭಾರತಕ್ಕೆ ಬಂದ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿರುವ ಶಿವರಾಜ್ ಕುಮಾರ್ ಆ ಬಳಿಕ ಸಿನಿಮಾದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.