ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಮಾನಿಗಳಿಗೆ ಸಂತಸದ ಸುದ್ದಿ. ರಸ್ತೆ ಅಪಘಾತದಿಂದ ಸುಮಾರು ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪಂತ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಅವರು ಪೂರ್ಣ ಪ್ರಮಾಣದಲ್ಲಿ ಆಡಲು ಸಾಧ್ಯವಾಗದಿದ್ದರೂ ಕನಿಷ್ಠ ಪ್ರಮುಖ ಆಟಗಾರನಾಗಿ ಕಣಕ್ಕೆ ಇಳಿಯುವ ಲಕ್ಷಣಗಳು ಎದ್ದು ಕಾಣುತ್ತಿದೆ.
2024ರ ಐಪಿಎಲ್ ಆರಂಭದ ವೇಳೆಗೆ ರಿಷಬ್ ಪಂತ್ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅವರು ಬ್ಯಾಟಿಂಗ್ ಮಾತ್ರ ಮಾಡಬಲ್ಲರು ಎಂದು ವರದಿಯಾಗಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿಕೆಟ್ ಕೀಪ್ ಮಾಡದಿದ್ದರೂ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆಯಂತೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮಾಲೀಕರು ಈಗಾಗಲೇ ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಪಂತ್ ರೀ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇತ್ತೀಚೆಗಷ್ಟೇ ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ, ಪಾರ್ಥಿವ್ ಪಟೇಲ್, ಜಹೀರ್ ಖಾನ್ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದು ಪಂತ್ ಸಂಪೂರ್ಣ ಫಿಟ್ ಆಗಿದ್ದಾರೆಂಬುದಕ್ಕೆ ಸಾಕ್ಷಿ.