ಬೆಂಗಳೂರು: ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ.. ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಸೋಷಿಯಲ್ ಮೀಡಿಯಾ ಸೇರಿದಂತೆ ಇಡೀ ಇಂಟರ್ ನೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ ಹೆಸರು. ವಿಶ್ವಕಪ್ನಲ್ಲಿ ಆಡಿದ ಪ್ರತಿ ಪಂದ್ಯದಲ್ಲೂ ದಾಖಲೆ ಬರೆದ ಕಿಂಗ್ ಕೊಹ್ಲಿ, ಕೊನೆಗೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತಿ ಹೆಚ್ಚು ಒಡಿಐ ಶತಕಗಳ ದಾಖಲೆಯನ್ನು ಮುರಿದಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ ಮೂರು ಶತಕಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದಾದ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೂರು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸದ ಸೀಮಿತ ಓವರ್ಗಳ ಸರಣಿಗಳಿಗೆ ವಿರಾಮ ಪಡೆಯಲು ವಿರಾಟ್ ಕೊಹ್ಲಿ ಬಯಸಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲನೇ ಟಿ20 ಪಂದ್ಯ ಡಿಸೆಂಬರ್ 10 ರಂದು ಡರ್ಬನ್ನಲ್ಲಿ ನಡೆಯಲಿದೆ. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆಗಾರರು ಇನ್ನೂ ಪ್ರಕಟಿಸಿಲ್ಲ. ಈ ಹಿನ್ನೆಲೆಯಲ್ಲಿ ವೈಟ್ ಬಾಲ್ ಕ್ರಿಕೆಟ್ನಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳುವ ಉದ್ದೇಶ ಹೊಂದಿರುವುದಾಗಿ ಕಿಂಗ್ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.