ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಕೆಲಸ ಮಾಡಲು ಪ್ಯಾನ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯಲು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ತೆಗೆದುಕೊಳ್ಳಲು ಅಥವಾ ಐಟಿಆರ್ ಫೈಲ್ ಮಾಡಲು, ಪ್ಯಾನ್ ಕಾರ್ಡ್ ಬೇಕೇ ಬೇಕು. ಹೀಗಿದ್ದಾಗ ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ಸರ್ಕಾರ 1,435 ಕೋಟಿ ರೂ ವ್ಯಯಿಸಲಿದೆ.
ಏನಿದು ಪ್ಯಾನ್ 2.0 ಯೋಜನೆ?
ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಎನ್ನುವುದು ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಎಲ್ಲಾ ಹಣಕಾಸು ವಹಿವಾಟುಗಳು, ತೆರಿಗೆಗಳ ಮಾಹಿತಿಯನ್ನು ಕ್ರೋಢೀಕರಿಸುವ ಸಾಧನ. ಇದರ ತಂತ್ರಜ್ಞಾನವನ್ನು ಇನ್ನೊಂದು ಹಂತ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅದುವೇ ಪ್ಯಾನ್ 2.0. ಎರಡನೇ ಆವೃತ್ತಿಯ ಪ್ಯಾನ್ನಲ್ಲಿ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಲಾಗುತ್ತದೆ.
ಪ್ಯಾನ್ 2.0 ಹೆಚ್ಚು ನಿಖರವಾಗಿರುತ್ತದೆ. ಇದರ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚು ಸಮರ್ಪಕವಾಗಿರುತ್ತದೆ. ಸಮಸ್ಯೆಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಲಾಗುತ್ತದೆ. ನಿರ್ದಿಷ್ಟ ಸೆಕ್ಟರ್ನ ಎಲ್ಲಾ ವ್ಯವಹಾರ ಸಂಬಂಧಿತ ಚಟುವಟಿಕೆಗಳಿಗೆ ಇದು ಕಾಮನ್ ಬಿಸಿನೆಸ್ ಐಡೆಂಟಿಫೈರ್ ಆಗಿರಲಿದೆ.
ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತದೆ?
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಪ್ರಕಾರ, ಈಗಿರುವ ಪ್ಯಾನ್ ನಂಬರ್ ಅನ್ನು ಬದಲಿಸುವ ಅವಶ್ಯಕತೆ ಇಲ್ಲ. ಕಾರ್ಡ್ ಅಸಿಂಧುಗೊಳ್ಳುವುದಿಲ್ಲ. ಆದರೆ, ಅಪ್ಗ್ರೇಡ್ ಆಗಿರುವ ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು.
ಹೊಸ ಪ್ಯಾನ್ ಕಾರ್ಡ್ ಪಡೆದರೆ ಅದರಲ್ಲಿ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಆದರೆ, ಕ್ಯೂಆರ್ ಕೋಡ್ನಂತಹ ಹೊಸ ಫೀಚರ್ಗಳಿರುತ್ತವೆ. ಹೊಸ ಪ್ಯಾನ್ ಕಾರ್ಡ್ಗೆ ಶುಲ್ಕ ನೀಡಬೇಕಿಲ್ಲ.
ಆದಾಯ ತೆರಿಗೆ ಇಲಾಖೆಯು ಇಲ್ಲಿಯವರೆಗೆ 78 ಕೋಟಿ ಪ್ಯಾನ್ ಕಾರ್ಡ್ಗಳನ್ನು ವಿತರಿಸಿದೆ. ಇದರಲ್ಲಿ ಶೇ. 98ರಷ್ಟು ಪ್ಯಾನ್ ಕಾರ್ಡ್ಗಳನ್ನು ವ್ಯಕ್ತಿಗಳು ಹೊಂದಿದ್ದಾರೆ. ಈಗ ಇಷ್ಟೂ ಪ್ಯಾನ್ ಕಾರ್ಡ್ಗಳಿಗೆ ಬದಲಾಗಿ ಅಪ್ಗ್ರೇಡೆಟ್ ಪ್ಯಾನ್ ಕಾರ್ಡ್ ವಿತರಿಸಲಾಗುತ್ತದೆ.